ಹೊಸದಿಲ್ಲಿ: ಲಷ್ಕರ್-ಎ-ತೊಯ್ಬಾ ಉಗ್ರನನ್ನು ದೆಹಲಿ ಗಡಿಯ ಬಳಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತ ಬಾಂಗ್ಲಾದೇಶದಿಂದ ಕಾರ್ಯನಿರ್ವಹಿಸುತ್ತಾ ಭಾರತದಲ್ಲಿ ದಾಳಿಗಳನ್ನು ಆಯೋಜಿಸುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ಶಬ್ಬಿರ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದ್ದು, ಕಾಶ್ಮೀರಿ ಎಂದೂ ಕರೆಯಲ್ಪಡುವ ಈತ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯ ಕಂಗನ್ ನಿವಾಸಿಯಾಗಿದ್ದಾನೆ. ಭಾರತ ಕೇಂದ್ರಿತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪ ಈತನ ಮೇಲಿದೆ. ಕೇಂದ್ರೀಯ ಸಂಸ್ಥೆಗಳ ಸಮನ್ವಯದೊಂದಿಗೆ ದೆಹಲಿ ಪೊಲೀಸರ ವಿಶೇಷ ಘಟಕವು ಆತನನ್ನು ಬಂಧಿಸಿದೆ. ಬಂಧಿತ ಆರೋಪಿಯು ಮೆಟ್ರೋ ಪೋಸ್ಟರ್ ಪ್ರಕರಣದಲ್ಲಿ ಇತ್ತೀಚೆಗೆ ಬೇಧಿಸಲಾದ ಎಲ್‌ಇಟಿ ಮಾಡ್ಯೂಲ್‌ಗೆ ಸಂಬಂಧಿಸಿದ್ದಾನೆ. ದೆಹಲಿ ಪೊಲೀಸರು ಫೆಬ್ರವರಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ದಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಭಯೋತ್ಪಾದಕ ಮಾಡ್ಯೂಲ್ ಅನ್ನು ಕಿತ್ತುಹಾಕಿದ್ದರು, ಇದರ ನಿರ್ವಾಹಕ ಬಾಂಗ್ಲಾದೇಶದಿಂದ ಕಾರ್ಯನಿರ್ವಹಿಸುತ್ತಿದ್ದಾನೆಂದು ನಂಬಲಾಗಿತ್ತು. ಕೋಲ್ಕತ್ತಾ ಮತ್ತು ತಮಿಳುನಾಡಿನಾದ್ಯಂತ ನಡೆದ ಸಂಘಟಿತ ಕಾರ್ಯಾಚರಣೆಗಳಲ್ಲಿ ಎಂಟು ಜನರನ್ನು ಬಂಧಿಸಲಾಗಿದ್ದು, ಇದರಲ್ಲಿ ಏಳು ಮಂದಿ ಬಾಂಗ್ಲಾದೇಶಿ ಪ್ರಜೆಗಳು ಮತ್ತು ಪಶ್ಚಿಮ ಬಂಗಾಳದ ಒಬ್ಬ ಭಾರತೀಯ ಪ್ರಜೆ ಸೇರಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

