ಬೈಂದೂರು: ಇಲ್ಲಿನ ತಾಲ್ಲೂಕು ಕಚೇರಿಯ ಮುಂಭಾಗದ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಂದ ಚಿನ್ನದ ಬಳೆಯನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಆರೋಪಿಗಳನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಅವಿನಾಶ್ ಸುನಿಲ್ ಗಾಯಕವಾಡ (27) ಸಂತೋಷಿ ವಿಶಾಲ್ ಜಾಧವ (31) ಅರ್ಚನಾ ಸುಶೀಲ್ ಜಾಧವ (40) ಬಂಧಿತರು. ಏ.27ರಂದು ಬೈಂದೂರು ತಾಲ್ಲೂಕು ಕಚೇರಿಯ ಮುಂಭಾಗದ ಬಸ್ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಸಹನಾ ಪೈ ಎಂಬುವವರ ಗಮನ ಬೇರೆಡೆ ಸೆಳೆದಿದ್ದು, ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಸಹನಾ ಪೈ ಅವರನ್ನು ದೂಡಿ ಬಳೆಯನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಬೈಂದೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಅವರ ನೇತೃತ್ವದ ಸುನಿಲ್ ಕುಮಾರ್ ಬಿ.ವೈ ಮತ್ತು ನವೀನ್ ಬೋರ್ಕರ್ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಅಂದಾಜು ₹2.5 ಲಕ್ಷ ಮೌಲ್ಯದ 17.27 ಗ್ರಾಂ ಚಿನ್ನದ ಬಳೆ ಹಾಗೂ ಕಟ್ಟರ್ ಮತ್ತು ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

