ಬೆಳ್ತಂಗಡಿ: ಸೋಮಂತಡ್ಕದಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾಗ ಧರ್ಮಸ್ಥಳ ಠಾಣಾ ಪೊಲೀಸರು ದಾಳಿ ನಡೆಸಿ, ಒಬ್ಬನನ್ನು ವಶಕ್ಕೆ ಪಡೆದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಕ್ಕಿಂಜೆ ನಿವಾಸಿ ಅನಿಲ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದನ ಸಾಗಾಟ ಮಾಡುತ್ತಿದ್ದ ತೋಮಸ್ ತೋಟತ್ತಾಡಿ, ಕಬೀರ ಹಾಗೂ ದನ ಮಾರಾಟ ಮಾಡಿದ ಕಾನರ್ಪ ರಾಘವೇಂದ್ರ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ. ಬುಧವಾರ ರಾತ್ರಿ ಸೋಮಂತಡ್ಕದಲ್ಲಿ ಮಾಂಸದ ಉದ್ದೇಶಕ್ಕಾಗಿ ಅಕ್ರಮ ದನಸಾಗಾಟ ಮಾಡುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಪಿಕಪ್ ವಾಹನದಲ್ಲಿದ್ದವರು ತಪ್ಪಿಸಿಕೊಂಡಿದ್ದಾರೆ. ಬಳಿಕ ಪರಿಶೀಲನೆ ನಡೆಸಿ, ಸೋಮಂತಡ್ಕ ಬಸ್ ನಿಲ್ದಾಣದ ಸಮೀಪ ಅವಿತು ಕುಳಿತಿದ್ದ ಅನಿಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ಕಕ್ಕಿಂಜೆಯ ತೋಮಸ್ ಹಾಗೂ ಕಬೀರ್ ಎಂಬಾತನೊಂದಿಗೆ ಸೇರಿ ಕಾನರ್ಪ ರಾಘವೇಂದ್ರ ಭಟ್ ಅವರಿಂದ ದನವನ್ನು ಮಾಂಸಕ್ಕಾಗಿ ಖರೀದಿಸಿ ಮಾಂಸ ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದ. ಪಿಕಪ್ ವಾಹನವನ್ನು ವಶಕ್ಕೆ ಪಡೆದು, ದನವನ್ನು ರಕ್ಷಣೆ ಮಾಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

