ಸಿಲಿಕಾನ್ ಸಿಟಿಯಲ್ಲಿ ಎಟಿಎಂ ಗ್ರಾಹಕರನ್ನು ಗುರಿಯಾಗಿಸಿಕೊಂಡು ವಂಚನೆಗೆ ಇಳಿದಿದ್ದ ಇಬ್ಬರು ಖದೀಮರಿಗೆ ಸ್ಥಳೀಯ ಸಾರ್ವಜನಿಕರೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಿನ ಕುರುಬರಹಳ್ಳಿ ವೃತ್ತದ ಬಳಿ ನಡೆದಿದೆ.ಇಲ್ಲಿನ ರಾಜಕುಮಾರ್ ಪ್ರತಿಮೆ ಬಳಿ ಇರುವ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಲು ಬರುವ ಸಾರ್ವಜನಿಕರನ್ನು, ಅದರಲ್ಲೂ ವಿಶೇಷವಾಗಿ ವಯಸ್ಸಾದವರನ್ನು ಮತ್ತು ಕಾರ್ಡ್ ಬಳಸಲು ಸರಿಯಾಗಿ ತಿಳಿಯದವರನ್ನು ಈ ಇಬ್ಬರು ಯುವಕರು ವಂಚಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್‌ಗಳನ್ನು ಬದಲಾಯಿಸುವುದು ಅಥವಾ ಪಿನ್ ನಂಬರ್ ಕದ್ದು ಹಣ ಲೂಟಿ ಮಾಡುವುದು ಇವರ ಪ್ಲಾನ್ ಆಗಿತ್ತು ಎಂದು ಶಂಕಿಸಲಾಗಿದೆ. ಎಟಿಎಂ ಬಳಿ ಈ ಯುವಕರ ವರ್ತನೆ ಹಾಗೂ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಮತ್ತು ಗ್ರಾಹಕರು ತಕ್ಷಣವೇ ಅವರನ್ನು ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ ಖದೀಮರ ವಂಚನೆಯ ಆಟ ಬಯಲಾಗುತ್ತಿದ್ದಂತೆ ಆಕ್ರೋಶಗೊಂಡ ಸಾರ್ವಜನಿಕರು ಇಬ್ಬರು ಯುವಕರಿಗೂ ಸ್ಥಳದಲ್ಲೇ ಚೆನ್ನಾಗಿ ಧರ್ಮದೇಟು ನೀಡಿದ್ದಾರೆ. ಸದ್ಯ ಗಲಾಟೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆರೋಪಿಗಳನ್ನು ಸಾರ್ವಜನಿಕರ ಕೈಯಿಂದ ಬಿಡಿಸಿ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯಿಂದಾಗಿ ಕುರುಬರಹಳ್ಳಿ ವೃತ್ತದ ಸುತ್ತಮುತ್ತ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

