ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಕೌಟುಂಬಿಕ ದುರಂತವೊಂದು ಬೆಳಕಿಗೆ ಬಂದಿದೆ. ಧಾರವಾಡದ ರಂಕಾ ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯರಾದ ಡಾ. ಕಿರಣ್ ಹೊನ್ನಣ್ಣವರ್ (45) ಅವರನ್ನು ಚಾಕುವಿನಿಂದ ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಪತ್ನಿ ಪ್ರಿಯಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಒಂದು ಕೊಠಡಿಯಲ್ಲಿ ವೈದ್ಯ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಮತ್ತೊಂದು ಕೊಠಡಿಯಲ್ಲಿ ಎಂಟು ವರ್ಷದ ಪುತ್ರ ನೇಹಿತ್ ಮೇಲೂ ಚಾಕುವಿನಿಂದ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ರಕ್ತದ ಮಡುವಿನಲ್ಲೇ ಕಂಡು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಮಗುವಿನಲ್ಲಿ ಉಸಿರು ಇರುವುದನ್ನು ಗಮನಿಸಿ, ವಿಳಂಬ ಮಾಡದೆ ಖಾಸಗಿ ಆಸ್ಪತ್ರೆಗೆ ರವಾನಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಿಂದ ಅಪಾರ್ಟ್‌ಮೆಂಟ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮೃತ ಕಿರಣ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ನಿಖರ ಕಾರಣ ಏನು, ಕೊಲೆಗೆ ಕಾರಣವಾದ ಹಿನ್ನೆಲೆ ಏನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ. ಪೊಲೀಸ್ ತನಿಖೆಯ ಬಳಿಕವೇ ಘಟನೆಯ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

