ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ನಕಲಿ ಕಂಪನಿ ಸ್ಥಾಪಿಸಿ, ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿ ಯುವಕ-ಯುವತಿಯರಿಂದ ಪರೀಕ್ಷೆ ಹೆಸರಿನಲ್ಲಿ ತಲಾ ₹2,000 ರಿಂದ ₹3,000 ವಸೂಲಿ ಮಾಡುತ್ತಿದ್ದ ವಂಚನೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಹಲವು ವರ್ಷಗಳಿಂದ ನೂರಾರು ಅಭ್ಯರ್ಥಿಗಳಿಗೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷೆ ನಡೆಸಿದ ಬಳಿಕ ಫಲಿತಾಂಶ ತಿಳಿಸುವುದಾಗಿ ಹೇಳಿ ಅಭ್ಯರ್ಥಿಗಳನ್ನು ಕಳುಹಿಸುತ್ತಿದ್ದ ಆರೋಪಿಗಳು, ನಂತರ ಕರೆ ಮಾಡಿದವರಿಗೆ “ಆಯ್ಕೆಯಾಗಿಲ್ಲ” ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಕೆಲ ಅಭ್ಯರ್ಥಿಗಳು ಪರೀಕ್ಷಾ ಪತ್ರಿಕೆಗಳನ್ನು ತೋರಿಸುವಂತೆ ಒತ್ತಾಯಿಸಿದಾಗ ಅನುಮಾನಗೊಂಡು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಇದು ಸಂಪೂರ್ಣ ನಕಲಿ ಕಂಪನಿ ಎಂಬುದನ್ನು ಪತ್ತೆಹಚ್ಚಿದ್ದು, ಪ್ರಮುಖ ಆರೋಪಿ ಪವನ್ ಗೋಪಾಲ್‌ನನ್ನು ಬಂಧಿಸಿದ್ದಾರೆ. ಈ ವಂಚನೆ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

