ಉತ್ತರಕರ್ನಾಟಕ ಶ್ರದ್ಧಾ ಭಕ್ತಿ ಕೇಂದ್ರ ಶ್ರೀಗುರುಸಿದ್ಧಾರೂಢರ ಮಠ. ಅದ್ವೈತದ ಕಾಶಿ ಅಂತಾನೇ ದೇಶದೆಲ್ಲೆಡೆ ಖ್ಯಾತಿ ಹೊಂದಿದೆ. ಇಷ್ಟಾರ್ಥ ಈಡೇರಿಸುವ ಶ್ರೀಗುರುವಿನ ನೆನೆದು ಇಲ್ಲಿಗೆ ಬರೋ ಭಕ್ತರ ಸಂಖ್ಯೆ ಕಡಿಮೆಯೇನಿಲ್ಲ. ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ ಅಂತ ಭಕ್ತರೇ ಅತ್ಯಂತ ಭಕ್ತಿಪೂರ್ವಕವಾಗಿ ಹೇಳುವ ಶ್ರೀಮಠದಲ್ಲಿ ನಡೆದ ತೆಪ್ಪದ ತೇರಿಗೆ ಸಾವಿರಾರು ಭಕ್ತರು ಬಂದಿದ್ರು.
ಸುತ್ತಲೂ ಭಕ್ತ ಸಾಗರ. ಓಂನಮಃ ಶಿವಾಯ ಎಂಬ ಮಂತ್ರಸಾರ. ಎಲ್ಲರ ಬಾಯಲ್ಲೂ ಶ್ರೀಗುರು ಸಿದ್ಧಾರೂಢರ ಜೈಕಾರ.ಸಿದ್ಧಾರೂಢ ಸದ್ಗುರು ತಂದೆ ಉದ್ಧಾರಾದೆವು ನಿನ್ನಿಂದ ಅನ್ನೋ ಭಕ್ತರ ಹಾಡು ಸೂರ್ಯ-ಚಂದ್ರರಷ್ಟೇ ಸತ್ಯ. ಶ್ರೀಗುರುವಿನ ಸ್ಮರಣೆಯಲ್ಲಿ ಭಕ್ತರು ತಮ್ಮನ್ನೇ ತಾವು ಮೈಮರೆಯೋ ಸಮಯವೇ ಶ್ರಾವಣ ಮಾಸದಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ನಡೆಯೋ ತೆಪ್ಪದ ತೇರು ಉತ್ಸವ. ಜಲರಥೋತ್ಸವೆಂತಲೂ ಇದನ್ನ ಭಕ್ತರು ಕರೀತಾರೆ. ಪ್ರತಿ ವರ್ಷ ಶ್ರಾವಣ ಮಾಸ ಬಂದ್ರೇ ಏಳು ದಿನಗಳವರೆಗೂ ಇಲ್ಲಿ ನಿಜಗುಣ ಶಾಸ್ತ್ರದ ಪ್ರವಚನ ನಡೆಯುತ್ತೆ. ಜ್ಞಾನದಾಸೋಹದ ಬಳಿಕ ನಡೆಯೋದೇ ಈ ಜಲರಥೋತ್ಸವ. ಶ್ರೀಗುರುಸಿದ್ಧಾರೂಢರ 89ನೇ ತೆಪ್ಪದ ತೇರನ್ನ ಕಣ್ತುಂಬಿಕೊಳ್ಳೋದಕ್ಕೆ ಈ ಸಾರಿಯೂ ಬಂದ ಭಕ್ತರ ಸಂಖ್ಯೆಗೇನೂ ಕಡಿಮೆಯಿರಲಿಲ್ಲ. ಕೆರೆಯಲ್ಲಿ ಐದು ಸುತ್ತು ಹಾಕೋವರೆಗೂ ಭಕ್ತರು ಆರೂಢರಿಗೆ ಜೈಕಾರ ಹಾಕ್ತಾಯಿದ್ರು. ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ, ಸಿದ್ಧಾರೂಢ ಜೋಳಿಗೆ ಭಕ್ತರಿಗೆಲ್ಲ ಹೋಳಿಗೆ.. ಒಂದಾ ಎರಡಾ ಆರೂಢರನ್ನ ನೆನೆಯೋದೇ ಭಕ್ತರಿಗೆ ಹಬ್ಬ. ಕಲ್ಯಾಣಿಯ ಸುತ್ತ ಸೇರಿದ್ದ ಭಕ್ತರು ಉತ್ತತ್ತಿ, ಬಾಳೆಹಣ್ಣು, ಲಿಿಂಬೆಹಣ್ಣು ಸ್ವಾಮಿಯ ತೇರಿಗೆ ಎಸೆದು ಶ್ರೀಗುರುವಿನ ಕೃಪೆಗೆ ಪಾತ್ರರಾದರು. ಪ್ರತಿ ವರ್ಷವೂ ಶ್ರೀ ಸಿದ್ಧಾರೂಢ ಟ್ರಸ್ಟ್ ಕಮೀಟಿ ಜಲರಥೋತ್ಸವವನ್ನ ಅಚ್ಚುಕಟ್ಟಾಗಿಯೇ ಆಯೋಜಿಸಿತ್ತು.
ಮಹೇಂದ್ರ ಸಿಂಘಿ, ಸದಸ್ಯರು, ಶ್ರೀಗುರುಸಿದ್ಧಾರೂಢರ ಟ್ರಸ್ಟ್ ಕಮಿಟಿ
ಶ್ರಾವಣ ಮಾಸದಲ್ಲಿ ನಡೆಯೋ ಜಲರಥೋತ್ಸವ ನೋಡೋದಕ್ಕೆ ಬರೀ ರಾಜ್ಯವಷ್ಟೇ ಅಲ್ಲ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಬರ್ತಾರೆ. ತಮ್ಮ ಕಷ್ಟಗಳಿಗೆ ಶ್ರೀಗುರುವಿನ ಸನ್ನಿಧಾನದಲ್ಲಿ ಪರಿಹಾರ ಪಡೀತಾ ಬಂದಿರೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿ ನಡೆಯೋ ತೆಪ್ಪದ ತೇರಿನ ಉತ್ಸವಕ್ಕೂ ಒಂದು ಪ್ರತೀತಿ ಇದೆ. 100 ವರ್ಷದ ಹಿಂದೆ ಬರಗಾಲ ಬಂದಂತ ಸಂದರ್ಭದಲ್ಲಿ ಶ್ರೀಮಠದ ಭಕ್ತೆಯೊಬ್ಬರು ಅಜ್ಜನ ಸನ್ನಿಧಾನಕ್ಕೆ ಬರ್ತಾಳೆ. ಆರೂಢರ ಬಳಿ ಮಳೆ-ಬೆಳೆ ಇಲ್ಲ ಅನ್ನೋ ಕಷ್ಟವನ್ನ ಹೇಳಿಕೊಳ್ತಾಳಂತೆ. ಆಗ ಶ್ರೀಗುರು ಸಿದ್ಧಾರೂಢರ ಕೃಪೆಯಿಂದಾಗಿ ಒಳ್ಳೇ ಮಳೆಯಾಗಿ ಇಲ್ಲಿರೋ ಕೆರೆ ತುಂಬಿತ್ತಂತೆ. ಆಗಿನಿಂದ ಈವರೆಗೂ ಇದೇ ಕೆರೆ ಯಾವಾಗಲೂ ಬತ್ತಿಲ್ಲ. ಭಕ್ತೆಯೊಬ್ಬಳು ಬೇಡಿದ ವರದಿಂದಾಗಿ ಕೆರೆ ತುಂಬಿದ್ಮೇಲೆ ಅಂದಿನಿಂದ ಈವರೆಗೂ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಜಲರಥೋತ್ಸವ ಇರುತ್ತೆ. ಉತ್ಸವದಲ್ಲಿ ಪಾಲ್ಗೊಂಡ ಭಕ್ತರು ಈ ಸಾರಿಯೂ ನಾಡಿಗೆ ಒಳ್ಳೇ ಮಳೆಯಾಗಲಿ ಅಂತ ಬೇಡಿಕೊಂಡ್ರು.
ರಂಗಾ ಬದ್ದಿ, ಸದಸ್ಯರು, ಶ್ರೀಗುರುಸಿದ್ಧಾರೂಢರ ಟ್ರಸ್ಟ್ ಕಮಿಟಿ
ಬೇಡಿದ ವರ ಕರುಣಿಸೋ ಶ್ರೀಗುರುವಿನ ನೆನದರೇ ಕಷ್ಟ ಎಂಬುದೇ ಇಲ್ಲ. ಇಂಥ ಶ್ರದ್ಧಾಭಕ್ತಿ ಕೇಂದ್ರದಲ್ಲಿ ನಡೆದ ತೆಪ್ಪದ ತೇರಿನಲ್ಲಿ ಪಾಲ್ಗೊಂಡ ಲಕ್ಷಾಂತರ ಭಕ್ತರು ಶ್ರೀಗುರುವಿನ ಕರುಣೆಗೆ ಪಾತ್ರವಾದರು. ಪುನೀತರಾದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





