ಮೈಸೂರು: ಪತ್ರಿಕೋದ್ಯಮ ರಾಜಶೇಖರ ಕೋಟಿ ಅವರಿಗೆ ವೃತ್ತಿಯಾಗಿರಲಿಲ್ಲ. ಅದು ಅವರಿಗೆ ಬದುಕಾಗಿತ್ತು. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಗಟ್ಟಿಯಾದ ಧ್ವನಿ ಎತ್ತುವ ಜತೆಗೆ ಹೋರಾಟಗಳ ಬೆನ್ನಿಗೆ ನಿಂತಿದ್ದ ಕೋಟಿ ಅವರು ಸಮಾಜಕ್ಕೆ ಮಾದರಿಯಾದವರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮಕ್ಕೆ ವಿಡಿಯೋ ಸಂದೇಶ ಕಳುಹಿಸಿ, ಶುಭನುಡಿಗಳನ್ನಾಡಿದರು.
ಒಂದು ಪ್ರಾದೇಶಿಕ ಪತ್ರಿಕೆಯಾಗಿ ‘ಆಂದೋ ಲನ’ಕ್ಕೆ ೫೦ ವರ್ಷಗಳು ತುಂಬಿರುವುದು ಬಹಳ ಸಂತೋಷದ ಸಂಗತಿಯಾಗಿದೆ. ಈ ಮಹತ್ವಪೂರ್ಣವಾದ ೫೦ನೇ ವರ್ಷದ ಸಾರ್ಥಕ ಸಂಭ್ರಮದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುವ ಮನಸ್ಸು ಇತ್ತು. ಆದರೆ, ಕಾರಣಾಂತರಗಳಿಂದ ಬರಲು ಸಾಧ್ಯವಾಗಿಲ್ಲ. ಮೈಸೂರಿನ ‘ಆಂದೋಲನ’ ದಿನಪತ್ರಿಕೆಗೆ ತನ್ನದೇ ಆದ ಹೆಸರು, ಪರಂಪರೆ ಇದೆ. ರಾಜಶೇಖರ ಕೋಟಿ ಅವರಿಗೆ ಪತ್ರಿಕೋದ್ಯಮ ಕೇವಲ ವೃತ್ತಿಯಾಗಿರಲಿಲ್ಲ. ಅವರಿಗೆ ಅದು ಬದುಕಾಗಿತ್ತು. ‘ಆಂದೋಲನ’ದ ರೂವಾರಿ ರಾಜಶೇಖರ ಕೋಟಿ ಅವರು ದೂರದ ಹಾವೇರಿ ಜಿಲ್ಲೆಯಿಂದ ಮೈಸೂರಿಗೆ ಬಂದು ಸಮಾಜದ ಹೋರಾಟಗಳನ್ನು ಬದುಕಿನ ಹೋರಾಟವಾಗಿಸಿಕೊಂಡು ಶೋಷಣೆ, ಅನ್ಯಾಯದ ವಿರುದ್ಧ ‘ಆಂದೋಲನ’ವನ್ನು ಕಟ್ಟಿ ಬೆಳೆಸಿದವರು. ಮೈಸೂರು, ಮಂಡ್ಯ, ಚಾಮರಾಜ ನಗರ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಪರಂಪರೆ ಬೆಳೆಸುವಲ್ಲಿ ‘ಆಂದೋಲನ’ ಪತ್ರಿಕೆಯ ಪಾತ್ರ ಬಹಳ ದೊಡ್ಡದು ಇದೆ. ಕಳೆದ ೫೦ ವರ್ಷಗಳಲ್ಲಿ ೫೦೦ಕ್ಕೂ ಹೆಚ್ಚು ಪತ್ರಕರ್ತರನ್ನು ರೂಪಿಸಿರುವ ‘ಆಂದೋಲನ’ ಇನ್ನಷ್ಟು ಸಂಭ್ರಮದಿಂದ ಶತಮಾನೋತ್ಸವ ಆಚರಿಸಲೆಂದು ಹಾರೈಸುತ್ತೇನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





