ವಿಜಯಪುರ: ಯುವಕನೊಬ್ಬನ ಮೇಲೆ ಕಳ್ಳತನ ಆರೋಪ ಹೊರಿಸಿ, ಆತನನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡುವ ನೆಪದಲ್ಲಿ ಥಳಿಸಿ ಆತ್ಮಹತ್ಯೆಗೆ ಕಾರಣರಾದ ಆರೋಪದ ಮೇಲೆ ಪಿಎಸ್ಐವೊಬ್ಬರನ್ನು ಅಮಾನತು ಮಾಡಲಾಗಿದೆ. ಇಲ್ಲಿನ ಎಪಿಎಂಸಿ ಠಾಣೆ ಪಿಎಸ್ಐ ಸೋಮೇಶ ಗೆಜ್ಜಿ ಅಮಾನತುಗೊಂಡ ಅಧಿಕಾರಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಈ ಆದೇಶ ಹೊರಡಿಸಿದ್ದಾರೆ. ಕೆಲ ದಿನಗಳ ಹಿಂದೆ ಬಸವನಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ಸೋಮಶೇಖರ ನಾಗಮೋತಿ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೂ ಮುನ್ನ ಯುವಕ ಸೋಮಶೇಖರ, ತಮ್ಮ ಸಹೋದರನ ಕಾರಿನಲ್ಲಿದ್ದ ಹಣ ಕದ್ದಿದ್ದಾನೆ ಎಂಬ ಆರೋಪದ ಮೇಲೆ ಪಿಎಸ್ಐ ಸೋಮೇಶ ದೂರು ದಾಖಲಿಸಿಕೊಂಡು ಠಾಣೆಗೆ ಕರೆಯಿಸಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಅಲ್ಲದೆ, ಘಟನೆಯಿಂದ ಮನನೊಂದ ಸೋಮಶೇಖರ ವಿಡಿಯೋ ಸಂದೇಶ ಹಾಗೂ ಡೆತ್ನೋಟ್ ಬರೆದಿಟ್ಟು ಕೊಲ್ಹಾರದ ಬಳಿ ಕೃಷ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪಿಎಸ್ಐ ಸೋಮೇಶ ಗೆಜ್ಜಿ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ, ತನಿಖೆ ಮುಂದುವರೆಸಲಾಗಿದೆ ಎಂದು ಎಸ್ಪಿ ಆನಂದಕುಮಾರ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





