ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ದುಷ್ಟ ಪತಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಪತ್ನಿ ಸುಧಾಳನ್ನು ಕೊಲೆ ಮಾಡಿರುವ ಪತಿ ಶಿವಯ್ಯ ಹಿರೇಮಠ ಪರಾರಿಯಾಗಿದ್ದಾನೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಶಿವಯ್ಯ ಮತ್ತು ಸುಧಾ, ಪಾಲಕರಿಂದ ದೂರ ಇದ್ದರು. ನೇಕಾರ ನಗರದ ಬಾಡಿಗೆ ಮನೆಯಲ್ಲಿದ್ದ ದಂಪತಿಗೆ ಒಂದೂವರೆ ತಿಂಗಳ ಗಂಡು ಮಗುವಿದೆ. ಗಂಡಹೆಂಡತಿ ನಡುವೆ ಹೊಂದಾಣಿಕೆ ಕೊರತೆಯಿಂದ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಸುಧಾ ಲಮಾಣಿಯನ್ನು ಪ್ರೀತಿಸಿ ಮದುವೆಯಾಗಿದ್ದ ಶಿವಯ್ಯ ಹಿರೇಮಠ ಕೆಲಸ ಮಾಡದೆ ಕುಡಿದು ಸಾಲ ಮಾಡಿಕೊಂಡಿದ್ದನಂತೆ. ಕಳೆದ ರಾತ್ರಿ ಜಗಳ ಮಾಡಿ ಸುಧಾಳ ಕತ್ತು ಹಿಸುಕಿರುವ ಶಿವಯ್ಯ ಹೊರಗಿಂದ ಬಾಗಿಲು ಚಿಲಕ ಹಾಕಿ ಪರಾರಿಯಾಗಿದ್ದಾನೆ. ಮಗು ಅಳುತ್ತಿದ್ದುದನ್ನು ನೋಡಿ ಅಕ್ಕಪಕ್ಕದ ಮನೆಯವರು ಬಾಗಿಲು ತೆರೆದಾಗ ಸುಧಾ ಕೊಲೆಯಾಗಿರುವುದು ಗೊತ್ತಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಗಡುಕನ ಪತ್ತೆಗೆ ಬಲೆಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





