ವಿಧಾನ ಮಂಡಲದಲ್ಲಿ ಇಂದು ರಾಜ್ಯಪಾಲರು ಮಂಡಿಸಿದ ಭಾಷಣವು ರಾಜ್ಯದ ಅಭಿವೃದ್ಧಿಯ ದಿಕ್ಸೂಚಿಯಂತಾಗಿರದೇ, ಅದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತಿತ್ತು ಎಂದು ಮಾಜಿ ಸಚಿವರು ಮತ್ತು ನರಗುಂದ ಶಾಸಕರಾದ ಸಿ.ಸಿ ಪಾಟೀಲರು ಟೀಕಿಸಿದ್ದಾರೆ.
ಕರ್ನಾಟಕದ ಹಿತಾಸಕ್ತಿಯ ರಕ್ಷಣೆ ತಮ್ಮ ಉದ್ದೇಶವೆಂದು ರಾಜ್ಯಪಾಲರ ಬಾಯಿಂದ ಹೇಳಿಸಲಾಗಿದೆ. ಆದರೆ ವಾಸ್ತವದಲ್ಲಿ ನಮ್ಮ ಬಿಜೆಪಿ ಸರ್ಕಾರವು ರಾಜ್ಯದ ಸಮಗ್ರ ಹಿತಾಸಕ್ತಿ ರಕ್ಷಿಸಲು ಜಾರಿಗೊಳಿಸಿದ್ದ ಅನೇಕ ಯೋಜನೆಗಳ ಬಗ್ಗೆ ಇಂದಿನ ರಾಜ್ಯಪಾಲರ ಭಾಷಣದಲ್ಲಿಚಕಾರ ಕೂಡ ಎತ್ತಿಲ್ಲ. ಒಟ್ಟಾರೆ ಈ ಭಾಷಣವು ಅತ್ಯಂತ ನೀರಸವಾಗಿತ್ತು. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಬೆನ್ನೆಲುಬಾದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಯಾವುದೇ ಕಾರ್ಯಯೋಜನೆಗಳನ್ನೇ ಪ್ರಕಟಿಸದೇ ಈ ರಾಜ್ಯ ಸರ್ಕಾರವು ದಕ್ಷ ಆಡಳಿತವನ್ನು ಮುಂದೆ ಹೇಗೆ ನೀಡಲು ಸಾಧ್ಯ? ಎಂದು ಸಿ.ಸಿ ಪಾಟೀಲರು ಪ್ರಶ್ನಿಸಿದರು.

ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಪದೇ ಪದೇ ಹೇಳಿಕೊಂಡಿರುವ ಈ ಸರ್ಕಾರ, ಈ ಹತ್ತು ಕೆಜಿ ಅಕ್ಕಿಯಲ್ಲಿ ನಮ್ಮ ಕೇಂದ್ರ ಸರ್ಕಾರದ ಪಾಲಾದ 5 ಕೆಜಿ ಅಕ್ಕಿಯೂ ಸೇರಿದೆ ಎಂಬುದನ್ನು ಹೇಳದೇ ಅಕ್ಕಿಯಲ್ಲಿಯೂ ರಾಜಕೀಯ ಬೆರೆಸಲು ಮುಂದಾಗಿರುವುದು ಈ ಭಾಷಣದಲ್ಲಿ ಸ್ಪಷ್ಟವಾಗಿದೆ.
ರಾಜ್ಯದ ಜನತೆಯ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಮತ್ತೆ ಪ್ರಾರಂಭಿಸುವುದಾಗಿ ಹೇಳಿಕೊಂಡಿರುವುದು ಹಾಸ್ಯಾಸ್ಪದ. ಕೆಲವು ಪೇಟೆ ಪಟ್ಟಣಗಳಲ್ಲಿ ಕೇವಲ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದರೆ ಇಡೀ ರಾಜ್ಯದ ಜನತೆಯ ಹೊಟ್ಟೆ ತುಂಬುತ್ತದೆಯೇ ? ಹಾಗಾದರೆ ಹಳ್ಳಿಗಳ ಮತ್ತು ಗ್ರಾಮೀಣ ಭಾಗದವರ ಹಸಿವು ನೀಗಿಸಲು ನೀವು ಯಾವ ಕ್ಯಾಂಟೀನ್ ಅಥವಾ ಹೋಟೆಲ್ ಪ್ರಾರಂಭಿಸುತ್ತೀರಿ ಎಂದು ಜನರೇ ಕೇಳುವಂತಾಗಿದೆ ಎಂಬುದಾಗಿ ಸಿ.ಸಿ. ಪಾಟೀಲರು ವ್ಯಂಗ್ಯವಾಡಿದರು.
ರಾಜ್ಯದ ಸಮಗ್ರ ವಿಕಾಸಕ್ಕೆ ನೀಲ ನಕ್ಷೆಯಂತೆ ಈ ಭಾಷಣ ಇರುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಈ ಭಾಷಣ ಎಷ್ಟು ನೀರಸವಾಗಿತ್ತೆಂದರೆ ಅನೇಕ ಜನಪ್ರಿಯ ಟಿವಿ ಚಾನಲ್ ಗಳು ಅರ್ಧಕ್ಕೆ ಈ ಭಾಷಣದ ಲೈವ್ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದು ಇದರಲ್ಲಿ ಹುರುಳಿರಲಿಲ್ಲ ಎಂಬುದನ್ನು ಸಾಬೀತುಪಡಿಸುವಂತಿತ್ತು ಎಂದು ಸಿ.ಸಿ. ಪಾಟೀಲರು ಅಭಿಪ್ರಾಯ ಪಟ್ಟರು.
ಕಾಂಗ್ರೆಸಿನ ಅಂತರ್ಗತವಾದ ವೋಟ್ ಬ್ಯಾಂಕ್ ರಾಜಕೀಯದ ಲಾಭಕ್ಕಾಗಿ ರಾಜ್ಯಪಾಲರ ಬಾಯಿಂದ ಒಂದಷ್ಟು ವಿಚಾರಗಳನ್ನು ಕಾಟಾಚಾರಕ್ಕಾಗಿ ಹೇಳಿಸಲು ಈಗಿನ ರಾಜ್ಯ ಸರ್ಕಾರ ಪ್ರಯತ್ನಿಸಿದೆಯಷ್ಟೇ. ಏಕೆಂದರೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳ ಅಭಿವೃದ್ಧಿಗೆ ನಮ್ಮ ಬಿಜೆಪಿ ಸರ್ಕಾರ ರೂಪಿಸಿದ್ದ ಅನೇಕ ಜನಪ್ರಿಯ ಕಾರ್ಯಕ್ರಮಗಳಿಗೆ ಈಗ ತಿಲಾಂಜಲಿ ನೀಡಿರುವುದು ದುರದೃಷ್ಟಕರವಾಗಿದೆ.
ಕಿಸಾನ್ ಸಮ್ಮಾನ್, ಜಲಜೀವನ್ ಮಿಷನ್, ಹೆದ್ದಾರಿಗಳ ಅಭಿವೃದ್ಧಿ ಈ ಮುಂತಾದ ಕೇಂದ್ರ ಸರ್ಕಾರದ ಅನೇಕ ಜನೋಪಯೋಗಿ ಯೋಜನೆಗಳಿಗೆ ರಾಜ್ಯ ಸರ್ಕಾರವೂ ಸಹಭಾಗಿತ್ವ ನೀಡಬೇಕು. ರಾಜ್ಯವೂ ಈ ನಿಟ್ಟಿನಲ್ಲಿ ತನ್ನ ಪಾಲನ್ನು ನೀಡಬೇಕು. ಆದರೆ ಈ ಬಗ್ಗೆ ಪ್ರಸ್ತುತ ರಾಜ್ಯ ಸರ್ಕಾರವು ಸ್ವಲ್ಪವೂ ಕಾಳಜಿ ಹೊಂದಿಲ್ಲ ಎಂಬುದು ಈ ರಾಜ್ಯಪಾಲರ ಭಾಷಣದಿಂದಲೇ ಗೊತ್ತಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಕರ್ನಾಟಕದ ಪ್ರಗತಿಗೆ ಧಕ್ಕೆಯಾದರೆ ಅದರ ಜವಾಬ್ದಾರಿಯನ್ನು ಈ ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ ಎಂದು ಸಿ.ಸಿ. ಪಾಟೀಲರು ವಿಶ್ಲೇಷಿಸಿದರು.
ಒಟ್ಟಾರೆ ಈ ಭಾಷಣವು ರಾಜ್ಯದ ಜನರ ನಿರೀಕ್ಷೆಯನ್ನು ಅರ್ಥ ಮಾಡಿಕೊಳ್ಳಲು ಸೋತಿರುವುದು ಸ್ಪಷ್ಟ. ಕೇವಲ ತಮ್ಮ ರಾಜಕೀಯ ಹಿತಾಸಕ್ತಿ ಹೆಚ್ಚಿಸಿಕೊಳ್ಳುವುದು ಮತ್ತು ರಾಜಕೀಯ ಸಂಘರ್ಷ ಸೃಷ್ಟಿಸುವುದೇ ಈ ಸರ್ಕಾರದ ಉದ್ದೇಶವಾಗಿದೆ ಎಂಬುದು ರಾಜ್ಯಪಾಲರ ಇಂದಿನ ಭಾಷಣದ ಮೂಲಕ ವ್ಯಕ್ತವಾಗಿದೆ ಎಂದು ಸಿ. ಸಿ. ಪಾಟೀಲರು ಟೀಕಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





