ಬೆಳಗಾವಿ: ಜಿಲ್ಲೆಯ ವಿವಿಧೆಡೆಯಿಂದ ಸಮಸ್ಯೆಗಳನ್ನು ಹೊತ್ತು ಬರುವ ಜನರಿಗೆ ಸಮಸ್ಯೆ ನಿವಾರಣೆ ಜೊತೆಗೆ ಜ್ಞಾನ ಭಂಡಾರವನ್ನು ಉಣಬಡಿಸುವ ಕೆಲಸವನ್ನು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪಂಚಾಯಿತಿ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪುಸ್ತಕಗಳನ್ನು ಓದುತ್ತಿರುವುದು
ಒಂದೆಡೆ ಶಿಸ್ತಿನಿಂದ ಆಸನಗಳಲ್ಲಿ ಕುಳಿತುಕೊಂಡು ಪುಸ್ತಕ ಓದುತ್ತಿರುವ ಜನ, ಮತ್ತೊಂದೆಡೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಭಾವಚಿತ್ರಗಳು ಎಲ್ಲರ ಗಮನ ಸೆಳೆಯುತ್ತಿರುವುದು. ಹೌದು ಜಿಲ್ಲಾಧಿಕಾರಿ ಕಚೇರಿಗೆ ನಿತ್ಯ ವಿವಿಧ ಕೆಲಸದ ನಿಮಿತ್ತ ನೂರಾರು ಜನ ಆಗಮಿಸುತ್ತಾರೆ. ಈ ವೇಳೆ ಜಿಲ್ಲಾಧಿಕಾರಿಗಳು ಬೇರೆ ಕೆಲಸದಲ್ಲಿ ನಿರತರಾಗಿದ್ದರೆ, ಸಾರ್ವಜನಿಕರ ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ಜನರಿಗೆ ಅನುಕೂಲ ಆಗಲಿ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಮ್ಮ ಕಚೇರಿ ಮುಂಭಾಗದ ಹಾಲ್ನಲ್ಲಿ ಒಂದು ಚಿಕ್ಕ ಲೈಬ್ರರಿ ಮತ್ತು ಫೋಟೋ ಗ್ಯಾಲರಿ ನಿರ್ಮಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪುಸ್ತಕಗಳ ಸಂಗ್ರಹ
ಈ ಲೈಬ್ರರಿಯಲ್ಲಿ ಕನ್ನಡದ ಕಥೆ, ಕಾದಂಬರಿ, ಕವನ, ಬಸವಾದಿ ಶರಣರ ವಚನಗಳು ಮತ್ತು ಜೀವನ ಚರಿತ್ರೆ, ಸಂವಿಧಾನ, ಭಗವಾನ್ ಬುದ್ಧ, ದಾಸಶ್ರೇಷ್ಠ ಕನಕದಾಸ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಸಿದ್ಧಾಂತ ಶಿಖಾಮನಿ, ವೇದ, ಉಪನಿಷತ್ತುಗಳು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕೈಪಿಡಿ, ಮಾಹಿತಿ ಹಕ್ಕು ಅಧಿನಿಯಮ – 2005, ಕರ್ನಾಟಕ ಸಿವಿಲ್ ಸೇವಾ ನಿಯಮಗಳು, ಸರ್ಕಾರದ ಯೋಜನೆಗಳ ಕೈಪಿಡಿ ಸೇರಿ ವಿವಿಧ ಪುಸ್ತಕಗಳು ಇಲ್ಲಿಗೆ ಆಗಮಿಸುವ ಜನರಿಗೆ ಜ್ಞಾನ ದಾಸೋಹ ನೀಡುತ್ತಿವೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪುಸ್ತಕಗಳನ್ನು ಓದುತ್ತಿರುವುದು
ಕಣ್ಮನ ಸೆಳೆಯುತ್ತಿರುವ ಡಿಜಿಟಲ್ ಫೋಟೋಗಳು: ಇನ್ನು ರಾಮದುರ್ಗ ತಾಲೂಕಿನ ಮುಳ್ಳೂರ ಗುಡ್ಡದಲ್ಲಿರುವ ಬೃಹದಾಕಾರದ ಶಿವನ ಮೂರ್ತಿ, ಕಣಬರಗಿಯ ಸಿದ್ದೇಶ್ವರ ದೇವಸ್ಥಾನ, ಗೋಕಾಕ್ ತಾಲೂಕಿನ ದೂಫದಾಳ ಜಲಾಶಯ, ಖಾನಾಪುರ ತಾಲೂಕಿನ ಚಿಕಲೆ ಜಲಪಾತ, ಹಲಸಿಯ ಐತಿಹಾಸಿಕ ರಾಮತೀರ್ಥ ಮಂದಿರ, ಕಿಲ್ಲಾ ಕೆರೆ ಆವರಣದಲ್ಲಿನ ದೇಶದ ಅತೀ ದೊಡ್ಡ ತಿರಂಗಾ ಧ್ವಜ, ಮಹಾತ್ಮಾ ಗಾಂಧೀಜಿ ಭೇಟಿ ನೀಡಿದ್ದ ವೀರಸೌಧ, ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ಸುವರ್ಣ ವಿಧಾನಸೌಧ, ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಮೃಗಾಲಯ, ಜಿಲ್ಲೆಯ ವಿಶೇಷ ತಿನಿಸುಗಳಾದ ಕುಂದಾ – ಕರದಂಟು – ಮಿಸಳ್ ಪಾವ್ – ಕಬ್ಬಿನ ಹಾಲಿನ ಡಿಜಿಟಲ್ ಫೋಟೋಗಳು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುವ ಪ್ರತಿಯೊಬ್ಬರನ್ನು ಆಕರ್ಷಿಸುತ್ತಿವೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಪರಿಚಯ ಈ ಫೋಟೋಗಳು ಮಾಡಿ ಕೊಡುತ್ತಿವೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪುಸ್ತಕಗಳನ್ನು ಓದುತ್ತಿರುವುದು
bigtvnews | Hubli Dharwad News | Kannada News | Karnataka News Hubli News | News In Hubli | Local news





