ಹುಬ್ಬಳ್ಳಿ: ಜರ್ಮನಿಯ ಬರ್ಲಿನ್‌ನಲ್ಲಿ ಜುಲೈ 28ರಿಂದ ಆಗಸ್ಟ್ 5ರವರೆಗೆ ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾರತ ತಂಡ 20 ಚಿನ್ನದ ಪದಕಗಳೊಂದಿಗೆ ಅಭೂತಪೂರ್ವ ಸಾಧನೆ ಮಾಡಿ ಸ್ವದೇಶಕ್ಕೆ ಮರಳಿದೆ.

ಅಲ್ಲದೇ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪದ ದೇವಪ್ಪ ಮೋರೆ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದು ಸ್ವಗ್ರಾಮಕ್ಕೆ ಆಗಮಿಸಿದ ಅವರನ್ನು ಗ್ರಾಮಸ್ಥರು ಹೆಗಲ ಮೆಲೆ ಹೊತ್ತೊಯ್ದು ಸ್ವಾಗತಿಸಿದರಲ್ಲದೇ ಭಾರತದ ತ್ರಿವರ್ಣ ಧ್ವಜವನ್ನು ಜರ್ಮನಿಯ ನೆಲದಲ್ಲಿ ಹಾರಿಸಿದ ತಮ್ಮೂರಿನ ಸಾಧಕನ ಸಾಧನೆಗೆ ಸಂಭ್ರಮಿಸಿದರು.ದೇವಪ್ಪ ಮೋರೆ60 ಮೀಟರ್ ಓಟದ ಸ್ಪರ್ಧೆಯನ್ನು 10.80 ಸೆಕೆಂದುಗಳಲ್ಲಿ ಹಾಗೂ 100 ಮೀಟರ್ ಓಟದ ಸ್ಪರ್ಧೆಯನ್ನು 18.80 ಸೆಕೆಂದುಗಳಲ್ಲಿ ಕ್ರಮಿಸಿ ಚಿನ್ನದ ಪದಕ ಕೊರಳಿಗೆ ಹಾಕಿಕೊಂಡಿದ್ದರು.

ಭಾರತ ಕುಬ್ಜರ ತಂಡದ ತರಬೇತುದಾರರು ಹಾಗೂ ಮ್ಯಾನೇಜರ್ ಆಗಿದ್ದ ಹುಬ್ಬಳ್ಳಿಯ ಶಿವಾನಂದ ಗುಂಜಾಳ ಅವರನ್ನು ಹೃತ್ಪೂರ್ವಕವಾಗಿ ಬರಮಾಡಿಕೊಂಡರು.ದೇಶ ಪ್ರತಿನಿಧಿಸುತ್ತಿದ್ದರೂ ಭಾರತ ಸರ್ಕಾರದಿಂದ ಯಾವುದೇ ಅನುದಾನವೂ ಬಂದಿಲ್ಲವಾದ್ದರಿಂದ ಹಲವು ದಾನಿಗಳ ನೆರವಿನಿಂದ ದೇವಪ್ಪ ಇತ್ತೀಚೆಗೆ ಜರ್ಮನಿಯ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಭಾರತ ತಂಡ 20 ಬಂಗಾರ ಅಲ್ಲದೇ 12 ಬೆಳ್ಳಿ,ಹಾಗೂ 10 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. 19 ಜನರ ಭಾರತ ತಂಡದಲ್ಲಿ ದೇವಪ್ಪ ಮೋರೆ ಸಹಿತ 8 ಜನರು ಕನ್ನಡಿಗರೇ ಇದ್ದರು. ರಾಜ್ಯದ ತುಳಸೀದರ 75 ಕೆ.ಜಿ.ಪವರ್ ಲಿಪ್ಟಿಂಗ್ ವಿಭಾಗದಲ್ಲಿ ಬಂಗಾರ ಗೆದ್ದರೆ,ನಾಗೇಶ ಸಹ ಬೆಳ್ಳಿ ಗೆದ್ದಿದ್ದರು.ವಿದೇಶಿ ನೆಲದಲ್ಲಿ ಅಪೂರ್ವ ಸಾಧನೆ ಮಾಡಿರುವ ಕುಬ್ಜ ಕ್ರೀಡಾಪಟುಗಳನ್ನು ಸರ್ಕಾರ ಮತ್ತು ಜಿಲ್ಲಾ ಆಡಳಿತ ಸನ್ಮಾನಿಸಿ ಗೌರವಿಸಬೇಕಾಗಿದೆ. ಅಲ್ಲದೇ ನೆರವಿನ ಹಸ್ತ ನೀಡಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





