ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರದಿಂದ ಬಳಲಿರುವ ರೈತರ ಮೇಲೆ ಈ ಸರಕಾರ ಬರೆ ಎಳೆಯುತ್ತಿದೆ. ಬರಗಾಲ ನಿರ್ವಹಣೆಯಲ್ಲಿ ಅದು ಸಂಪೂರ್ಣ ವಿಫಲವಾಗಿದೆ. ಛಡಿ ಏಟು ಕೊಡುವ ಆಂದೋಲನವನ್ನು ನಾವು 13ರಂದು ಮಾಡಲಿದ್ದೇವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ರೈತರು, ಬಡವರ ಮೇಲೆ ಬರೆ ಹಾಕುವ ಸರಕಾರ ಇದು ಎಂದು ಟೀಕಿಸಿದ ಅವರು, ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಕೃಷ್ಣಾ, ಕಳಸಾ ಬಂಡೂರಿ ಸೇರಿ ಉತ್ತರ ಕರ್ನಾಟಕದ ಯಾವುದೇ ನೀರಾವರಿ ಯೋಜನೆಗೆ ಒಂದು ನಯಾಪೈಸೆಯನ್ನೂ ಕೊಟ್ಟಿಲ್ಲ. ಆರು ತಿಂಗಳಾದರೂ ಒಂದು ಕಿಮೀ ರಸ್ತೆ ಮಾಡಿಲ್ಲ. ರೈತರು, ಉತ್ತರ ಕರ್ನಾಟಕದ ಬಗ್ಗೆ ಕಳಕಳಿರಹಿತ, ಅಭಿವೃದ್ಧಿ ಶೂನ್ಯ ಸರಕಾರ ಇದು ಎಂದು ಆರೋಪಿಸಿದರು.
ಈ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಸರಕಾರ, ಎಸ್‍ಸಿ, ಎಸ್‍ಟಿ, ಒಬಿಸಿಗಳ ಸರಕಾರ. ಎಸ್‍ಸಿ, ಎಸ್‍ಟಿಗಳ ಅಭಿವೃದ್ಧಿಗೆ ಮೀಸಲಿಟ್ಟ 34 ಸಾವಿರ ಕೋಟಿ ಹಣದಲ್ಲಿ 11,500 ಕೋಟಿ ಹಣವನ್ನು ಬೇರೆ ಇಲಾಖೆಗೆ ವರ್ಗಾಯಿಸಿದೆ. ದೇವರಾಜ ಅರಸು ನಿಗಮ, ಅಂಬೇಡ್ಕರ್ ನಿಗಮ, ಜಗಜೀವನ್ ರಾಂ ನಿಗಮ, ಅಂಬಿಗರ ಚೌಡಯ್ಯ ನಿಗಮ ಸೇರಿ ಅನೇಕ ಒಬಿಸಿ ನಿಗಮಗಳಿಗೆ ಒಂದು ಪೈಸೆ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಈ ಸರಕಾರಕ್ಕೆ ಪ್ರಥಮ ಆದ್ಯತೆಯೇ ಅಲ್ಪಸಂಖ್ಯಾತರು ಎಂದು ಟೀಕಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





