ಮೈಸೂರು: ರಾಮನ ಹೆಜ್ಜೆಗುರುತುಗಳು ದೇಶದಾದ್ಯಂತ ನೆಟ್ಟಿವೆ. ಆತ ಕಾಲಿಟ್ಟ ಸ್ಥಳಗಳೆಲ್ಲವೂ ಇವತ್ತಿಗೂ ಪವಿತ್ರ ಕ್ಷೇತ್ರಗಳಾಗಿ ಭಕ್ತರಿಂದ ಪೂಜಿಸಲ್ಪಡುತ್ತಿವೆ. ಇಂತಹ ಕ್ಷೇತ್ರಗಳ ಪೈಕಿ ಜಿಲ್ಲೆಯ ಕೆ.ಆರ್.ನಗರ ಬಳಿಯಿರುವ ಚುಂಚನಕಟ್ಟೆಯೂ ಒಂದಾಗಿದ್ದು, ಇಲ್ಲಿ ರಾಮ ನೆಲೆನಿಂತು ಭಕ್ತರಿಂದ ಪೂಜಿಸಲ್ಪಡುತ್ತಿದ್ದರೆ, ಇಲ್ಲಿ ನಡೆಯುವ ಜಾನುವಾರು ಜಾತ್ರೆ ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾಗಿದೆ.
ಕೊರೊನಾ ಮತ್ತು ಜಾನುವಾರುಗಳಿಗೆ ತಗುಲಿದ ಚರ್ಮಗಂಟು ರೋಗದ ಕಾರಣದಿಂದಾಗಿ ಕಳೆದ ಕೆಲವು ವರ್ಷಗಳಿಂದ ನಡೆಯದ ಚುಂಚನಕಟ್ಟೆ ಜಾನುವಾರು ಜಾತ್ರೆ ಈ ಬಾರಿ ಅದ್ಧೂರಿಯಾಗಿ ನಡೆಯುತ್ತಿರುವುದು ಜನಮನದಲ್ಲಿ ಸಂಭ್ರಮ ತಂದಿದೆ. ಈಗಾಗಲೇ ಆರಂಭವಾಗಿರುವ ಜಾತ್ರೆಯಲ್ಲಿ ಸುತ್ತಮುತ್ತಲಿನ ಊರುಗಳಲ್ಲದೆ ದೂರದೂರುಗಳಿಂದಲೂ ಜಾನುವಾರುಗಳು ಬಂದಿದ್ದು ಎಲ್ಲೆಂದರಲ್ಲಿ ದಷ್ಠಪುಷ್ಠ ಸುಂದರ ಎತ್ತುಗಳು ಕಂಡು ಬರುತ್ತಿದ್ದು, ಜಾನುವಾರು ಜಾತ್ರೆಗೆ ಶೋಭೆ ತಂದಿದೆ.
ಚುಂಚನಕಟ್ಟೆಯಲ್ಲಿ ನಡೆಯುವ ಜಾನುವಾರು ಜಾತ್ರೆ ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾಗಿದ್ದು, ಇದು ಬರೀ ಜಾನುವಾರು ಜಾತ್ರೆಯಾಗಿರದೆ ಗ್ರಾಮೀಣ ಸಂಸ್ಕೃತಿಯ ಭಾಗವಾಗಿ, ರೈತರು ಮತ್ತು ಖರೀದಿದಾರರ ನಡುವಿನ ಕೊಂಡಿಯಾಗಿ. ಗ್ರಾಮೀಣ ಜನರಿಗೆ ಸಡಗರ ಸಂಭ್ರಮದ ಹಬ್ಬವಾಗಿ ಗಮನಸೆಳೆಯುತ್ತಿದೆ. ಜಾತ್ರೆ ಎಂದರೆ ಜನಜಂಗುಳಿ, ಆಟ, ವ್ಯಾಪಾರ ವಹಿವಾಟು, ಖುಷಿ, ಸಂತಸ, ಸಂಭ್ರಮ ಹೀಗೆ ಎಲ್ಲವೂ ಇರುತ್ತದೆ. ಎಲ್ಲ ಜಾತ್ರೆಗಳಲ್ಲೂ ರೈತರಿಗೆ ಹೆಗಲುಕೊಟ್ಟು ದುಡಿಯುವ ಜಾನುವಾರು ಇರಲೇ ಬೇಕು. ಹೀಗಾಗಿ ಹೆಚ್ಚಿನ ಜಾತ್ರೆಗಳಲ್ಲಿ ಜಾನುವಾರುಗಳಿಗೆ ಸ್ಥಾನ ನೀಡಲಾಗುತ್ತಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





