Breaking News

ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಎಂ.ಬಿ.ಪಾಟೀಲ ಸಹಾಯಹಸ್ತ

ವಿಜಯಪುರ: ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದಿದ್ದರೂ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಇಬ್ಬರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ.
ನಗರ ತಮ್ಮ ಗೃಹ ಕಚೇರಿಗೆ ಸೋಮವಾರ ಆಗಮಿಸಿದ ಬಬಲೇಶ್ವರ ತಾಲ್ಲೂಕಿನ ಕಾಖಂಡಕಿ ಗ್ರಾಮದ ವಿದ್ಯಾರ್ಥಿ ಶ್ರೀಧರ ಬಸವರಾಜ ಕಲ್ಯಾಣಿ ಮತ್ತು ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ವಿದ್ಯಾರ್ಥಿ ಯಮನಪ್ಪ ಕಾಡಪ್ಪ ಮಾದರ ಅವರಿಗೆ ಸಚಿವರು ಎಂ. ಬಿ. ಬಿ. ಎಸ್. ಕೋರ್ಸಿನ ಮೊದಲ ವರ್ಷದ ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಊಟದ ಶುಲ್ಕಕ್ಕೆ ಅಗತ್ಯವಾಗಿರುವ ₹ 1,29,400 ಹಣದ ಚೆಕ್ ವಿತರಿಸಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್. ವಿ ಕುಲಕರ್ಣಿ, ವಿದ್ಯಾರ್ಥಿ ಶ್ರೀಧರ ಬಸವರಾಜ ಕಲ್ಯಾಣಿ ಅವರ ತಾಯಿ ಕಲಾವತಿ ಉಪಸ್ಥಿತರಿದ್ದರು. ಎಂ.ಬಿ.ಬಿ.ಎಸ್ ಕೋರ್ಸಿಗೆ ಬೋಧನೆ, ಹಾಸ್ಟೇಲ್ ಮತ್ತು ಊಟದ ಖರ್ಚು ಸೇರಿ ಒಟ್ಟು ₹ 5,17,600 ವೆಚ್ಚ ತಗುಲಲಿದ್ದು, ಈ ಎಲ್ಲ ಹಣವನ್ನು ಸಚಿವರು ಬಿ.ಎಲ್.ಡಿ.ಇ ಸಂಸ್ಥೆಯಿಂದ ಭರಿಸಲಿದ್ದಾರೆ. ಅಲ್ಲದೇ, ಇದರ ಮೊದಲ ಕಂತಿನ ಹಣದ ಚೆಕ್ ಅನ್ನು ಸೋಮವಾರ ವಿತರಿಸಿದರು.
ವಿದ್ಯಾರ್ಥಿ ಶ್ರೀಧರ ಬಸವರಾಜ ಕಲ್ಯಾಣಿ ಮಾತನಾಡಿ, ನೀಟ್‌ನಲ್ಲಿ ನನಗೆ 36400 ಸ್ಥಾನ ಬಂದಿದ್ದು, ಕಲಬುರಗಿ ಜಿಮ್ಸ್ ಕಾಲೇಜ್ ಸರ್ಕಾರಿ ಕೋಟಾದಡಿ ಎಂ.ಬಿ.ಬಿ.ಎಸ್ ಸೀಟು ಸಿಕ್ಕಿದೆ. ಪ್ರವೇಶ ಶುಲ್ಕ ಭರಿಸಲು ಪರದಾಡುತ್ತಿದ್ದ ನಮಗೆ ಸಚಿವ ಎಂ. ಬಿ. ಪಾಟೀಲ ಅವರು ಆಪದ್ಬಾಂಧವರಾಗಿದ್ದಾರೆ. ನಮಗೆ ಸಹಾಯ ಮಾಡುವ ಮೂಲಕ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಮುಂದೆ ಎಂ.ಡಿ ಓದಿ ವಿಜಯಪುರದಲ್ಲಿಯೇ ಎಂ. ಬಿ. ಪಾಟೀಲ ಅವರ ಹೆಸರಿನಲ್ಲಿ ಆಸ್ಪತ್ರೆ ಪ್ರಾರಂಭಿಸಿ ಬಡಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *