ಬಳ್ಳಾರಿ: ಬಳ್ಳಾರಿ ಗಣಿ ಧಣಿ ಜನಾರ್ದನ ರೆಡ್ಡಿ ಅಕ್ರಮಗಣಿಗಾರಿಕೆ ಪ್ರಕರಣದಡಿ 2011 ರಲ್ಲಿ ಜೈಲು ಸೇರಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ರೆಡ್ಡಿ, ಬಳಿಕ ಷರತ್ತುಬದ್ಧ ಜಾಮೀನು ಪಡೆದಿದ್ದರು. 2011 ರಿಂದ ಈವರಗೆ ತನ್ನೂರು ಬಳ್ಳಾರಿಗೆ ಮುಕ್ತ ಪ್ರವೇಶಕ್ಕೆ ರೆಡ್ಡಿಗೆ ಅವಕಾಶ ಇರಲಿಲ್ಲ. ಕೋರ್ಟ್ ಅನುಮತಿ ಪಡದೇ ರೆಡ್ಡಿ ಬಳ್ಳಾರಿಗೆ ಬರಬೇಕಿತ್ತು. ಸುಮಾರು 14 ವರ್ಷಗಳ ಕಾಲ ರೆಡ್ಡಿ ತನ್ನೂರನ್ನ ಬಿಟ್ಟು, ಹೈದರಾಬಾದ್, ಬೆಂಗಳೂರು, ಗಂಗಾವತಿಯಲ್ಲಿ ಜೀವನ ಮಾಡುವಂತಾಗಿತ್ತು. ಕೊನೆಗೂ ನಿರಂತರ ಕಾನೂನು ಹೋರಾಟದ ಬಳಿಕ ಸುಪ್ರೀಂ ಕೋರ್ಟ ಬಳ್ಳಾರಿಗೆ ಮುಕ್ತ ಪ್ರವೇಶಕ್ಕೆ ರೆಡ್ಡಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಹೀಗಾಗಿ ಬಳ್ಳಾರಿಗೆ ರೆಡ್ಡಿ ಬರುತ್ತಿದ್ದಾರೆ ಎನ್ನುತ್ತಲೇ ರಾಜಕೀಯ ಗರಿಗೆದರಿದೆ. ಅಭಿಮಾನಿಗಳು ಬಳ್ಳಾರಿ ಎಸ್ಪಿ ಸರ್ಕಲ್, ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು ಮುಂಬರುವ ಸಂಡೂರು ಉಪ ಚುನಾವಣೆಗೆ ರೆಡ್ಡಿ ಎಂಟ್ರಿ ಬಹಳಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ತನ್ನದೇ ಆದ ರಾಜಕೀಯ ತಂತ್ರಗಾರಿಕೆ ಮೂಲಕ ಸಂಡೂರನ್ನು ಬಿಜೆಪಿ ತೆಕ್ಕೆಗೆ ಪಡೆಯಲು ಶತಪ್ರಯತ್ನ ಮಾಡುವುದಂತೂ ಖಚಿತವಾಗಿದೆ. 2008 ರಲ್ಲಿದ್ದ ರಾಜಕೀಯ ಪಾರುಪತ್ಯವನ್ನ ರೆಡ್ಡಿ ಮತ್ತೊಮ್ಮೆ ಸಾಧಿಸಲು ಮತ್ತು ಅಖಂಡ ಬಳ್ಳಾರಿ ಮೇಲೆ ರಾಜಕೀಯ ಹಿಡಿತ ಸಾಧಿಸಲು ಗಾಲಿ ರೆಡ್ಡಿ ಚಾಣಾಕ್ಷತನ, ತಂತ್ರಗಾರಿಕೆ ಮಾಡುವುದಂತು ಪಕ್ಕಾ. ಹೀಗಾಗಿ ರೆಡ್ಡಿ ವಿರೋಧಿ ಬಣಕ್ಕೆ ಈಗಾಗಲೇ ಆತಂಕ ಶುರುವಾಗಿದೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

