ಬೀದರ್: ಬೀದರ್-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಪ್ರಾರಂಭಿಸಬೇಕು ಎಂದು ಸಂಸದ ಸಾಗರ್ ಖಂಡ್ರೆ ಆಗ್ರಹಿಸಿದರು.
ತೆಲಂಗಾಣದ ಸಿಕಿಂದ್ರಾಬಾದ್‌ನಲ್ಲಿ ನಡೆದ ದಕ್ಷಿಣ ಮಧ್ಯ ರೈಲ್ವೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬೀದರ್ ಮತ್ತು ಇತರ ಪ್ರಮುಖ ನಗರಗಳ ನಡುವಿನ ರೈಲು ಸಂಚಾರವನ್ನು ಹೆಚ್ಚಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು.
ಬೀದರ್-ಯಶವಂತಪುರ ರೈಲು ವಾರದಲ್ಲಿ ನಾಲ್ಕು ಬಾರಿ ಬೀದರ್‌ನಿಂದ ಹಾಗೂ ಮೂರು ಬಾರಿ ಲಾತೂರಿನಿಂದ ಸಂಚರಿಸುತ್ತಿದೆ. ನಿತ್ಯ ಸಾವಿರಾರು ಜನ ಪ್ರಯಾಣಿಸುತ್ತಿದ್ದಾರೆ ಜನಸಂಖ್ಯೆಗೆ ಅನುಗುಣವಾಗಿ ಈ ರೈಲು ಸಾಕಷ್ಟು ಅನುಕೂಲಕರವಲ್ಲ. ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೀದರ್-ಯಶವಂತಪುರ ರೈಲು ವಾಯಾ ಕಲಬುರಗಿ ಮೂಲಕ ಓಡಿಸಬೇಕು. ಅದರೊಂದಿಗೆ ವಂದೇ ಭಾರತ್ ರೈಲು ಕೂಡ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ಬೀದರ್-ಮುಂಬೈ ರೈಲು ವಾರದಲ್ಲಿ ಮೂರು ದಿನ ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಈ ರೈಲು ನಿತ್ಯ ಓಡಿಸಬೇಕು. ತಾಂಡೂರು-ಜಹೀರಾಬಾದ್ ಹೊಸ ರೈಲು ಮಾರ್ಗವನ್ನು ಚಿಂಚೋಳಿ ಮೂಲಕ ಮಾಡಲು ಯೋಜಿಸಬೇಕು. ಇದರಿಂದ ಆ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ ಖಾನಾಪುರದ ಪಿಟ್ ಲೈನ್ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಬೀದರ್‌ನಿಂದ ನವದೆಹಲಿಗೆ ನೇರ ರೈಲು ಸಂಪರ್ಕದ ಅಗತ್ಯವಿದ್ದು, ದಕ್ಷಿಣ ಎಕ್ಸ್‌ಪ್ರೆಸ್ ರೈಲನ್ನು ಬೀದರ್‌ವರೆಗೆ ವಿಸ್ತರಿಸಬೇಕು ಎಂದರು.
ಬೀದರ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ (ಎಲ್‌ಸಿ) ಗೇಟ್, ಆರ್‌ಒಬಿ ಮತ್ತು ಆರ್‌ಯುಬಿ ನಿರ್ಮಾಣ ಅಥವಾ ಸುಧಾರಣೆಗೆ ಒಪ್ಪಿಗೆ ನೀಡಲು ತಕ್ಷಣ ಅನುಮೋದನೆ ಕೊಡಬೇಕೆಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

