Breaking News

ಸುಖ ಸಂಸಾರಕ್ಕೆ ಇಬ್ಬರು ಮಕ್ಕಳು ಇದ್ದರೇ ಸಾಕು: ಸಿಎಂ ಸಿದ್ದರಾಮಯ್ಯ ಸಲಹೆ

ಹೊಸಪೇಟೆ: ಜನಸಂಖ್ಯೆಯಲ್ಲಿ ಭಾರತ ಚೀನಾ ದೇಶವನ್ನು ಹಿಂದಿಕ್ಕಿದ್ದು, ದೇಶದ ಜನಸಂಖ್ಯೆ 140 ಕೋಟಿ ತಲುಪಿದೆ. ಹೀಗಾಗಿ ಆರತಿಗೊಂದು, ಕೀರ್ತಿಗೊಂದು ಎರಡು ಮಕ್ಕಳಿಗೆ ಜನ್ಮ ನೀಡಿ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಭಾನುವಾರ ಮಾಜಿ ಶಾಸಕ ಸಿರಾಜ್‌ ಶೇಖ್‌ ಅವರ ಪುತ್ರನ ಆರತಕ್ಷತೆ ಸಮಾರಂಭದಲ್ಲಿ ಆಯೋಜಿಸಿದ್ದ ಸರ್ವ ಧರ್ಮಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಸ್ವಾಮೀಜಿಯೊಬ್ಬರು ಹೆಚ್ಚು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕೆಂದು ಸಲಹೆ ನೀಡಿದ್ದಾರೆ.
ಈಗಾಗಲೇ ದೇಶದ ಜನಸಂಖ್ಯೆ ನಾಗಾಲೋಟದಲ್ಲಿ ಏರಿಕೆ ಆಗುತ್ತಿದೆ. ಸುಖ ಸಂಸಾರಕ್ಕೆ ಮಕ್ಕಳು ಇಬ್ಬರೇ ಇದ್ದರೆ ಸಾಕು. ಇದನ್ನೇ ಅನುಸರಿಸಿ ಎಂದು ನವ ವಧು-ವರರಿಗೆ ಸಲಹೆ ನೀಡಿದರು.
ಬಡ ಕುಟುಂಬಗಳು ಮದುವೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಮದುವೆ ಖರ್ಚಿಗಾಗಿ ಸಾಲ ಮಾಡಬೇಕಾಗುತ್ತದೆ. ಸಾಮೂಹಿಕ ವಿವಾಹಗಳು ಬಡ-ಮಧ್ಯಮದವರ ಪಾಲಿಗೆ ವರದಾನವಾಗಿದೆ. ಬಡವರು ಸರಳ ವಿವಾಹಕ್ಕೆ ಆದ್ಯತೆ ನೀಡಬೇಕು. ಹೆಣ್ಣುಮಕ್ಕಳಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದರು.
ಅಂತರ್ಜಾತಿ ವಿವಾಹಗಳಿಂದ ಸಮಾಜದಲ್ಲಿ ಜಾತಿ ವ್ಯವಸ್ಥೆ ಅಳಿದು, ಸಮ ಸಮಾಜ ನಿರ್ಮಾಣವಾಗಲಿದೆ. ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಇದರಿಂದಾಗಿ ಸಮಾಜದಲ್ಲಿನ ಜಾತಿ ವ್ಯವಸ್ಥೆ ತೊಲಗಿ ಸಮ ಸಮಾಜ ನಿರ್ಮಾಣವಾಗಲಿದೆ. ನಾನು ನಮ್ಮ ಜಾತಿಯಲ್ಲೇ ಮದುವೆ ಆಗಿದ್ದೇನೆ. ಆದರೆ, ನನ್ನ ಹಿರಿಯ ಮಗ ಅಂತರ್ಜಾತಿ ವಿವಾಹವಾಗಿದ್ದ. ಈಗ ಅವನು ಇಲ್ಲ, ಎರಡನೇ ಮಗ ಮದುವೆ ಆಗಿಲ್ಲ.ಅಂತರ್ಜಾತಿ ವಿವಾಹವನ್ನು ನಾನೂ ಸಹ ಬೆಂಬಲಿಸುತ್ತೇನೆ ಎಂದರು.
ಬಸವಣ್ಣನವರ ಕಾಲದಲ್ಲಿಯೇ ಅಂತರ್ಜಾತಿ ವಿವಾಹ ಪದ್ಧತಿ ಪ್ರಚಲಿತವಾಗಿತ್ತು. ಇತರ ಧರ್ಮಗಳನ್ನೂ ಗೌರವಿಸುವ ವ್ಯವಸ್ಥೆ ಸಮಾಜದಲ್ಲಿರಬೇಕು. ಚಲನೆ ರಹಿತವಾದ ಜಾತಿ ವ್ಯವಸ್ಥೆಯಲ್ಲಿ ನಾವಿದ್ದೇವೆ. ಆರ್ಥಿಕ ಹಾಗೂ ಸಾಮಾಜಿಕ ಸ್ವಾವಲಂಬನೆಯಿಂದ ಚಲನೆಯಿಲ್ಲದ ಸಮಾಜಕ್ಕೆ ಜೀವ ಬರುತ್ತದೆ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಸಂಸದ ಈ.ತುಕಾರಾಂ, ಶಾಸಕರಾದ ಬಿ.ಎನ್‌. ನಾಗರಾಜ, ಎಚ್‌.ಆರ್‌.ಗವಿಯಪ್ಪ, ಡಾ|ಎನ್‌.ಟಿ.ಶ್ರೀನಿವಾಸ, ಎಂ.ಪಿ.ಲತಾ ಇದ್ದರು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *