Breaking News

ಕೆಎಎಸ್ ಪರೀಕ್ಷೆ ರದ್ದು: ಪ್ರಶ್ನೆ ಪತ್ರಿಕೆ ದೋಷದ ಕುರಿತು ಕಾನೂನು ಹೋರಾಟ ಆರಂಭ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆ ದೋಷದ ಕುರಿತು ಕಾನೂನು ಹೋರಾಟ ಆರಂಭವಾಗಿದೆ. ಕೆಎಎಸ್ ಹುದ್ದೆಗಳ ನೇಮಕಾತಿಗೆ ನಡೆದ ಮರು ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಹಲವು ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದಾರೆ.
ಕೆಪಿಎಸ್‌ಸಿ 2024 ಆಗಸ್ಟ್‌ ಮತ್ತು ಡಿಸೆಂಬರ್ 29ರಂದು ಎರಡು ಬಾರಿ ಈ ಪರೀಕ್ಷೆಗಳನ್ನು ನಡೆಸಿದೆ. ಆದರೆ ಎರಡು ಬಾರಿಯೂ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪುಗಳ ಕಾರಣಕ್ಕೆ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಮೆಟ್ಟಿಲೇರಿದ್ದಾರೆ.
ಈ ಅರ್ಜಿಯನ್ನು ಮಂಗಳವಾರ ಎಸ್. ವೈ. ವಟವಟಿ ಮತ್ತು ಡಾ. ಅಮಿತಾ ಪ್ರಸಾದ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಮಂಡಳಿ ಪ್ರತಿವಾದಿ ಕೆಪಿಎಸ್‌ಸಿ ಅಭಿಪ್ರಾಯ ಆಲಿಸದೆ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.
ಆಕ್ಷೇಪಣೆ ಸಲ್ಲಿಕೆ ಮಾಡಲು ಸೂಚನೆ: ಅಭ್ಯರ್ಥಿಗಳ ವಾದ ಆಲಿಸಿದ ನ್ಯಾಯ ಮಂಡಳಿ ಕೆಪಿಎಸ್‌ಸಿ ವಿವರಣೆ ಕೇಳದೆ ಮಧ್ಯಂತರ ಆದೇಶ ನೀಡಲಾಗದು ಎಂದು ಹೇಳಿತು. ಕೆಪಿಎಸ್‌ಸಿ ಮತ್ತು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆ ವೇಳೆ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡುವಂತೆ ಸೂಚನೆ ನೀಡಿತು. ಪರೀಕ್ಷೆ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೆಪಿಎಸ್‌ಸಿಗೆ ಸೂಚನೆ ನೀಡಲಾಗಿದ್ದು, ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಅಭ್ಯರ್ಥಿಗಳ ಪರವಾಗಿ ವಾದ ಮಂಡನೆ ಮಾಡಿರುವ ವಕೀಲರು ಪೂರ್ವಭಾವಿ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಅನುವಾದದಲ್ಲಿ ಮತ್ತೆ ಲೋಪವಾಗಿದೆ. ಇದರಿಂದಾಗಿ ಪ್ರಶ್ನೆ ಪತ್ರಿಕೆಯಲ್ಲಿ ದೋಷವಿದ್ದು, ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ವಾದ ಮಂಡಿಸಿದರು.
ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಹಿನ್ನಲೆಯಲ್ಲಿ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ಪೂರ್ವಭಾವಿ ಪರೀಕ್ಷೆಯನ್ನು ರದ್ದುಗೊಳಿಸಬೇಕು. ಹೊಸದಾಗಿ ಪರೀಕ್ಷೆಯನ್ನು ನಡೆಸಲು ಕೆಪಿಎಸ್‌ಸಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಮಧ್ಯಂತರ ಕ್ರಮವಾಗಿ ಕೆಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಮಾಡದಂತೆ ತಡೆ ನೀಡಬೇಕು ಎಂದು ಮನವಿ ಮಾಡಿದರು. ಫಲಿತಾಂಶ ಪ್ರಕಟಣೆ ಕುರಿತು ಯಾವುದೇ ಆದೇಶ ನೀಡದ ಕೆಎಟಿ ಮುಂದಿನ ವಿಚಾರಣೆ ತನಕ ಯಾವುದೇ ಕ್ರಮ ಕೈಗೊಳ್ಳದಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದೆ.
ಕೀ ಉತ್ತರ ಪ್ರಕಟಿಸಲು ತಯಾರಿ: 2024ರ ಆಗಸ್ಟ್​ 27ರಂದು ಕೆಪಿಎಸ್‌ಸಿ ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯ್ನು ನಡೆಸಿತ್ತು. ಆದರೆ ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿನ ಕನ್ನಡ ದೋಷದ ಕಾರಣಕ್ಕೆ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಮರು ಪರೀಕ್ಷೆಯನ್ನು ಡಿಸೆಂಬರ್ 29ರಂದು ನಡೆಸಲಾಗಿತ್ತು.
ಆದರೆ ಮರು ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲೂ ದೋಷಗಳಿವೆ ಎಂದು ಆರೋಪಿಸಲಾಗಿದೆ. ಆದ್ದರಿಂದ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಹಲವು ಅಭ್ಯರ್ಥಿಗಳು ಒತ್ತಾಯ ಮಾಡುತ್ತಿದ್ದಾರೆ. ಆದರೆ ಕೆಪಿಎಸ್‌ಸಿ ಕೆಎಎಸ್ ಹುದ್ದೆಗಳ ನೇಮಕಾತಿಗೆ ಮರು ಪರೀಕ್ಷೆಯನ್ನು ನಡೆಸದೇ ಕೀ ಉತ್ತರವನ್ನು ಪ್ರಕಟಿಸಲು ತಯಾರಿಯನ್ನು ಮಾಡಿಕೊಳ್ಳುತ್ತಿದೆ.
ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪುಗಳ ಹಿನ್ನಲೆಯಲ್ಲಿ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಗೊ. ರು. ಚನ್ನಬಸಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಪ್ರಶ್ನೆ ಪತ್ರಿಕೆಯ ತಪ್ಪುಗಳ ಕುರಿತು ಗಮನ ಸೆಳೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ‌ ಕೈಗೊಳ್ಳಬೇಕು. ಮರು ಪರೀಕ್ಷೆಯನ್ನು ನಡೆಸಬೇಕು ಎಂದು ಒತ್ತಾಯಿಸಿದ್ದರು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *