ಹುಬ್ಬಳ್ಳಿ ನಗರದಲ್ಲಿ ಸಾಲದ ವಿಚಾರವಾಗಿ ಉಂಟಾದ ಕುಟುಂಬ ಕಲಹ ಪತ್ನಿಯ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ತೈಸಿನ್ ಶಿಗ್ಗಾಂ (28) ಹತ್ಯೆಯಾದ ಮಹಿಳೆ. ಪತಿ ಇರ್ಫಾನ್ ಶಿಗ್ಗಾಂ ಚಾಕುವಿನಿಂದ ಕುತ್ತಿಗೆ ಸೇರಿದಂತೆ ನಾಲ್ಕೈದು ಕಡೆ ಇರಿದು ಪತ್ನಿಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಗಾಂಧೀವಾಡದ ನಿವಾಸಿಗಳಾದ ದಂಪತಿಗಳು, ಕಳೆದ ಎರಡು ತಿಂಗಳ ಹಿಂದಷ್ಟೇ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರಕ್ಕೆ ಬಂದು ವಾಸವಾಗಿದ್ದರು. ಇರ್ಫಾನ್ ಗೌಂಡಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಸಾಲವನ್ನು ಮರುಪಾವತಿ ಮಾಡುವ ವಿಚಾರದಲ್ಲಿ ದಂಪತಿಗಳ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು. ತೆಗೆದುಕೊಂಡ ಸಾಲವನ್ನು ದುಡಿದು ತೀರಿಸುವಂತೆ ಪತ್ನಿ ತೈಸಿನ್ ಒತ್ತಾಯಿಸುತ್ತಿದ್ದಳು ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ತೈಸಿನ್ ಸಹೋದರರು ₹20 ಸಾವಿರ ಹಣ ನೀಡಿದ್ದರೂ ಸಹ ಜಗಳ ಮುಂದುವರಿದಿದೆ. ಮಾತಿನ ಚಕಮಕಿ ತಾರಕ್ಕೇರಿದ ವೇಳೆ ಕೋಪಗೊಂಡ ಇರ್ಫಾನ್ ಚಾಕುವಿನಿಂದ ದಾಳಿ ನಡೆಸಿ ಪತ್ನಿಯನ್ನು ಹತ್ಯೆಗೈದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಘಟನೆಯ ಬಳಿಕ ಆರೋಪಿ ಸ್ವತಃ ಕೇಶ್ವಾಪೂರ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಗೋಕುಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ದಂಪತಿಗಳಿಬ್ಬರು ಚಿಕ್ಕ ಮಕ್ಕಳು ಅನಾಥರಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

