ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ 7.11 ಕೋಟಿ ರೂ. ದರೋಡೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಸಿದ್ದಾಪುರ ಠಾಣೆ ಪೊಲೀಸರು 56ನೇ ಎಸಿಎಂಎಂ–ಸಿಸಿಎಚ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಗೋವಿಂದಪುರ ಠಾಣೆಯ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯಕ್ ಸೇರಿ ಒಂಬತ್ತು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–2023ರಡಿ ಆರೋಪ ದಾಖಲಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ. ದರೋಡೆ, ಅಕ್ರಮ ತಡೆ-ಬಂಧನ, ಸಾಕ್ಷ್ಯ ನಾಶ, ಅಪರಾಧ ಸಂಚು ಹಾಗೂ ಬೆದರಿಕೆ ಸೇರಿದಂತೆ ಹಲವು ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ. ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಿದ ಜಯನಗರ ಉಪವಿಭಾಗದ ಎಸಿಪಿ ನಾರಾಯಣಸ್ವಾಮಿ ಹಾಗೂ ಅವರ ತಂಡವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 1,328 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದ್ದು,
129 ಪ್ರಮುಖ ಸಾಕ್ಷ್ಯಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಒದಗಿಸಿದ್ದಾರೆ. ಇವುಗಳಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ, ತಾಂತ್ರಿಕ ದಾಖಲೆಗಳು ಹಾಗೂ ಆರೋಪಿಗಳ ಬೆರಳಚ್ಚು ಸೇರಿದಂತೆ ವೈಜ್ಞಾನಿಕ ಸಾಕ್ಷ್ಯಗಳೂ ಸೇರಿವೆ. ಪ್ರಕರಣದ ಹಿನ್ನೆಲೆ ನೋಡಿದರೆ, ಕಳೆದ ನವೆಂಬರ್ 20ರಂದು ಜೆ.ಪಿ.ನಗರದಿಂದ ಗೋವಿಂದಪುರ ವ್ಯಾಪ್ತಿಯ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ಸಿಎಂಎಸ್ ಸಿಬ್ಬಂದಿಯನ್ನು,
ಜಯನಗರದ ಅಶೋಕ ಸ್ತಂಭ ಸಮೀಪ ಆರ್‌ಬಿಐ ಅಧಿಕಾರಿಗಳಂತೆ ನಟಿಸಿ ಅಡ್ಡಗಟ್ಟಿ ದರೋಡೆ ನಡೆಸಲಾಗಿತ್ತು. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ನಂತರ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿತ್ತು. ದರೋಡೆಗೊಳಗಾದ ಬಹುತೇಕ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಐಷಾರಾಮಿ ಜೀವನ ನಡೆಸುವ ದುರಾಸೆ ಹಾಗೂ ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದಲೇ
ಕಾನ್‌ಸ್ಟೇಬಲ್ ಅಣ್ಣಪ್ಪ ನಾಯಕ್ ಮತ್ತು ಆತನ ಸಹಚರರು ಈ ದರೋಡೆಗೆ ಸಂಚು ರೂಪಿಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ದರೋಡೆ ಪ್ರಕರಣಕ್ಕೆ ಕಾನೂನಿನ ಮೂಲಕ ಅಂತಿಮ ತೀರ್ಪು ದೊರೆಯುವವರೆಗೆ ನ್ಯಾಯಾಲಯದ ವಿಚಾರಣೆಯ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

