ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್ ಕಳೆದ ಹಲವು ವರ್ಷಗಳಿಂದ ಕ್ಯಾತನಹಳ್ಳಿಯಲ್ಲಿ ಜ್ಯುವೆಲರಿ ವ್ಯಾಪಾರ ನಡೆಸುತ್ತಿದ್ದ. ದುಷ್ಕರ್ಮಿಗಳು ತನ್ನ ಮೇಲೆ ಆಯಸಿಡ್ ಎರಚಿ ಅಂಗಡಿಯಲ್ಲಿದ್ದ ಸುಮಾರು 170 ಗ್ರಾಂ ಚಿನ್ನ ಮತ್ತು 8 ಕೆಜಿ ಬೆಳ್ಳಿ ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಆತ ಆರೋಪಿಸಿದ್ದ. ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಈತನ ಪ್ರಕರಣವನ್ನು ಪೊಲೀಸರು ಸುಮೋಟೋವಾಗಿ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ವಿಚಾರಣೆ ವೇಳೆ ಜಿತೇಂದ್ರನ ಮುಖಕ್ಕೆ ಮಾತ್ರ ಗಾಯವಾಗಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಯಿತು. ಆಯಸಿಡ್ ದಾಳಿ ನಡೆದಿದ್ದರೆ ಕಣ್ಣುಗಳಿಗೂ ಗಂಭೀರ ಹಾನಿಯಾಗಬೇಕಿತ್ತು, ಆದರೆ ಅಂಥ ಯಾವುದೇ ಗಾಯಗಳು ಕಂಡುಬಂದಿರಲಿಲ್ಲ. ಇದರಿಂದ ಸಂಶಯಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಂದಿದೆ. ಚಿನ್ನದ ಸಾಲವನ್ನು ವಾಪಸ್ ನೀಡದೇ ತಪ್ಪಿಸಿಕೊಳ್ಳಲು ಮತ್ತು ಅಡವಿಟ್ಟ ಚಿನ್ನದ ಗ್ರಾಹಕರಿಂದ ಪಾರಾಗಲು ಜಿತೇಂದ್ರ ಈ ನಾಟಕ ರೂಪಿಸಿದ್ದ. ಚಿನ್ನಕ್ಕೆ ಬಳಸುವ ರಾಸಾಯನಿಕವನ್ನು ತನ್ನ ಮುಖಕ್ಕೆ ಬಳಿದುಕೊಂಡು, ಅಂಗಡಿ ದರೋಡೆ ಆಗಿದೆ ಎಂದು ಸುಳ್ಳು ದೂರು ನೀಡಿದ್ದ. ಜೊತೆಗೆ ಆರೋಪಿಗಳು ಸಿಸಿಟಿವಿ DVR ಕದ್ದೊಯ್ದಿದ್ದಾರೆ ಎಂದು ಹೇಳಿ ಎಲ್ಲರನ್ನೂ ನಂಬಿಸುವ ಪ್ರಯತ್ನ ಮಾಡಿದ್ದ. ಕೆಲವು ದಿನಗಳ ಬಳಿಕ ಅಂಗಡಿ ಮುಚ್ಚಿ ರಾಜಸ್ಥಾನಕ್ಕೆ ಮರಳುವ ಯೋಜನೆಯನ್ನೂ ಮಾಡಿಕೊಂಡಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸತ್ಯ ಬಯಲಾದ ನಂತರ ಪೊಲೀಸರು ಚಿನ್ನದ ಅಂಗಡಿ ಮಾಲೀಕನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

