ಬೆಂಗಳೂರು: ವೈಯಕ್ತಿಕ ದ್ವೇಷಕ್ಕೆ ಕೇರಳ ಮೂಲದ ವಿದ್ಯಾರ್ಥಿಗಳ ಕೋಣೆಗೆ ನುಗ್ಗಿ ದರೋಡೆ ಮಾಡಿದ್ದ ವಿದ್ಯಾರ್ಥಿ ಹಾಗೂ ಐವರು ಸಹಚರರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಅಭಿನೇಷ್ (22) ಡಿಪ್ಲೊಮಾ ವಿದ್ಯಾರ್ಥಿ. ಈತನ ಸಹಚರರಾದ ನವೀನ್ ಕುಮಾರ್ (23), ಕುಮಾರ್ (23), ವಿಮಲ್ ರಾಜ್ (24), ಕೈಲವಂದನಂ (23) ಮತ್ತು ಪ್ರೇಮ್ ಕುಮಾರ್ (24) ಬಂಧಿತರು. ಆರೋಪಿಗಳು ಕೋಣನಕುಂಟೆ ಠಾಣೆ ವ್ಯಾಪ್ತಿಯ ಪವಮಾನ ನಗರ ಕೆಂಬತ್ತಹಳ್ಳಿ ರಸ್ತೆಯಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳು ವಾಸವಾಗಿದ್ದ ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ 2 ಬೈಕ್‌ಗಳು, 4 ಮೊಬೈಲ್‌ಗಳು, 2 ಲ್ಯಾಪ್‌ಟಾಪ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿಗಳ ಪೈಕಿ ಅಭಿನೇಷ್ ನಗರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ಕೇರಳ ವಿದ್ಯಾರ್ಥಿಗಳ ಜತೆ ಜಗಳ ಮಾಡಿಕೊಂಡಿದ್ದ. ಅದರಿಂದ ಕೋಪಗೊಂಡಿದ್ದ ಆರೋಪಿ, ತಮಿಳುನಾಡಿನಿಂದ ತನ್ನ ಐವರು ಸಹಚರರನ್ನು ಕರೆಸಿ, ಏ.17ರಂದು ಕೇರಳ ವಿದ್ಯಾರ್ಥಿಗಳ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮೊಬೈಲ್, 10 ಸಾವಿರ ರೂ. ನಗದು, 2 ಲ್ಯಾಪ್‌ಟಾಪ್, ಮೊಬೈಲ್, ಬೈಕ್ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕೇರಳದ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

