Breaking News

ದೇವಸ್ಥಾನಗಳಿಗೆ ಕನ್ನ – ಖತರ್ನಾಕ್ ತಂದೆ-ಮಕ್ಕಳ ಅರೆಸ್ಟ್!

ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಗ್ಯಾಂಗ್ ಅನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸಿದ್ದಾರೆ. ಮಹೇಶ್, ರಘು ಜಿ. ಮತ್ತು ಅಂಜನ್ ಕುಮಾರ್ ಬಂಧಿತರಾಗಿದ್ದು, ಮತ್ತೊಬ್ಬ ಆರೋಪಿ ಗಂಗಾರೆಡ್ಡಿ ತಲೆಮರೆಸಿಕೊಂಡಿದ್ದಾನೆ. ವಿಶೇಷವೆಂದರೆ, ಈ ಗ್ಯಾಂಗ್‌ನಲ್ಲಿ ತಂದೆ ಮತ್ತು ಮಕ್ಕಳೇ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಜಾತ್ರೆ ಹಾಗೂ ವಿಶೇಷ ಉತ್ಸವಗಳು ನಡೆಯುವ ಗ್ರಾಮಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ರಾತ್ರಿ ವೇಳೆ ದೇವಸ್ಥಾನಗಳ ಬಾಗಿಲು ಮುರಿದು ಹುಂಡಿ ಹಣ ಹಾಗೂ ಬೆಳ್ಳಿ-ಬಂಗಾರದ ಆಭರಣಗಳನ್ನು ಕಳವು ಮಾಡುತ್ತಿದ್ದರು. ಹಾದ್ರೀಪುರ ಪಾಳ್ಯದ ಶ್ರೀ ಲಕ್ಷ್ಮೀ ದೇವಾಲಯ ಕಳ್ಳತನ ಪ್ರಕರಣದ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಸುಳಿವು ಸಿಕ್ಕಿದೆ. ಬಂಧಿತರಿಂದ ಹತ್ತಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದ್ದು, ವಿವಿಧ ಠಾಣೆಗಳ ವ್ಯಾಪ್ತಿಯ ಪ್ರಕರಣಗಳ ಬಗ್ಗೆ ತನಿಖೆ ಮುಂದುವರಿದಿದೆ. ತಲೆಮರೆಸಿಕೊಂಡಿರುವ ಆರೋಪಿ ಗಂಗಾರೆಡ್ಡಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Share News

About BigTv News