ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಅರಣ್ಯ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಕೆ.ಕೃಷ್ಣಪ್ರಸಾದ್ ರಾವ್ ಮಾನವನ ಸ್ವಾರ್ಥದಿಂದಾಗಿ ಕಾಡನ್ನು ಕಡಿದು ಅರಣ್ಯನಾಶ ಮಾಡಲಾಗುತ್ತಿದೆ. ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿರುವುದರಿಂದ ಜಾಗತಿಕ ತಾಪಮಾನದಲ್ಲಿ ವ್ಯತ್ಯಯವಾಗುತ್ತಿದ್ದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಪರಿಸರ ಪ್ರೇಮವನ್ನು ಬೆಳೆಸಿಕೊಂಡು ಗಿಡಮರಗಳನ್ನು ಬೆಳೆಸುವ ಮಕ್ಕಳಂತೆ ಪೋಷಿಸುವ ಸಂಕಲ್ಪ ಮಾಡಬೇಕು.. ಕಾಡಿದ್ದರೆ ನಾಡು ಎಂಬ ಸತ್ಯ ತಿಳಿಯಬೇಕು, ಮನೆಗೆರಡು ಮರ, ಊರಿಗೊಂದು ತೋಪು ಎಂಬ ಹಿರಿಯರ ನಾಣ್ಣುಡಿಯನ್ನು ಸಾಧಿಸಿತೋರಿಸಬೇಕು ಎಂದು ನ್ಯಾಯಾಧೀಶ ಕೃಷ್ಣಪ್ರಸಾದ್ ಮನವಿ ಮಾಡಿದರು… ಅಪರ ನ್ಯಾಯಾಧೀಶ ಬಸವರಾಜಪ್ಪ ತುಳಸಪ್ಪನಾಯಕ, ಸರ್ಕಾರಿ ಅಭಿಯೋಜಕ ರಾಜೇಶ್, ವಕೀಲರ ಸಂಘದ ಅಧ್ಯಕ್ಷ ಮಾದಾಪುರ ರಾಜೇಶ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ಪಾಂಡು, ವಲಯ ಅರಣ್ಯಾಧಿಕಾರಿ ಮಧುಸೂದನ್, ಸಹಾಯಕ ಅರಣ್ಯಾಧಿಕಾರಿ ರಾಘವೇಂದ್ರ ಸೇರಿದಂತೆ ನೂರಾರು ವಕೀಲರು ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಕಾಳಜಿ ಹಾಗೂ ಪ್ರೇಮವನ್ನು ಪ್ರದರ್ಶಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





