Breaking News

ಕರಾವಳಿಯ 13 ದೈವಸ್ಥಾನಗಳಿಗೆ ಕನ್ನ ಹಾಕಿದ್ದ ಖತರ್ನಾಕ್ ಕಳ್ಳರ ಬಂಧನ

ಮಂಗಳೂರು: ಕರಾವಳಿಯ ಜನ ಭಯ, ಭಕ್ತಿಯಿಂದ ಆರಾಧಿಸುವ ದೈವಸ್ಥಾನಗಳಿಗೆ ನುಗ್ಗಿ ದೈವಗಳ ಆಭರಣ ಕದಿಯುತ್ತಿದ್ದ ಕುಖ್ಯಾತ ಕಳ್ಳರ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಒಂಟಿ ಮನೆಗಳು, ದೇವಸ್ಥಾನಗಳನ್ನು ಟಾರ್ಗೆಟ್ ಮಾಡಿ ದೋಚುತ್ತಿದ್ದ ಈ ಖದೀಮರು ಬಳಿಕ ಒಂದು ಚೂರು ಸಾಕ್ಷ್ಯ ಸಿಗದ ರೀತಿ ಕೆಲಸ ಮುಗಿಸುತ್ತಿದ್ದರು.ಆದರೆ ಈಗ ಕಳ್ಳರ ಪಾಪದ ಕೊಡ ತುಂಬಿದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರು ಕಳ್ಳರ ಮೂಲಕ ಒಟ್ಟು 16 ಕಳ್ಳತನ ಪ್ರಕರಣಗಳಿಗೆ ಇತಿಶ್ರೀ ಹಾಡಲಾಗಿದೆ.

ಮಂಗಳೂರು ಪೊಲೀಸರಿಗೆ ಸವಾಲಾಗಿದ್ದ ಸರಣಿ ದೇವಾಲಯ ಕಳವು ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರಿನ ಒಂಟಿ ದೈವಸ್ಥಾನ ಹಾಗೂ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, 16 ಕಳ್ಳತನ ಪ್ರಕರಣ ಭೇದಿಸಿದ್ದಾರೆ. ಬಂಧಿತರಿಂದ 28 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಿವಾಸಿ ನಾಗಾ ನಾಯ್ಕ ಮತ್ತು ದಾವಣಗೆರೆಯ ಚನ್ನಗಿರಿ ನಿವಾಸಿ ಮಾರುತಿ ಸಿ.ವಿ. ಎಂದು ಗುರುತಿಸಲಾಗಿದೆ. ಈ ಕಳ್ಳರು ಮಂಗಳೂರಿನ ದೇವಾಲಯಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಮಂಗಳೂರಿನ ಒಂಟಿ ದೈವಸ್ಥಾನ, ದೇವಾಲಯಗಳನ್ನು ಗುರಿಯಾಗಿರಿಸಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡುತ್ತಿದ್ದರು. ಇದೀಗ ಕಳ್ಳರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದೈವದ ಮೊಗ, ಕಡ್ಸಲೆ ಸೇರಿದಂತೆ ವಿವಿಧ ಮಾದರಿಯ ದೈವದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗಾನಾಯ್ಕ ಕುಖ್ಯಾತ ಕಳ್ಳನಾಗಿದ್ದು, ಕೃತ್ಯ ಎಸಗಿದ ಬಳಿಕ ಯಾವುದೇ ಸುಳಿವು ಬಿಡುತ್ತಿರಲಿಲ್ಲ. ಆದರೆ ಈಗ ಅಚಾನಕ್ಕಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ದೈವಸ್ಥಾನಗಳನ್ನು ಗುರಿಯಾಗಿಸುತ್ತಿದ್ದ ನಾಗಾನಾಯ್ಕ್ ಈಗ ಮನೆ ಕಳವು ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.

ಮಂಗಳೂರಿನ ಅಶೋಕ ನಗರದ ಮನೆಯೊಂದರಲ್ಲಿ ಕಳ್ಳತನ ಮಾಡಿ ಹೋಗುತಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ. ಪೊಲೀಸರು ಸಿಸಿಟಿವಿ ತಪಾಸಣೆ ನಡೆಸಿದಾಗ, ವ್ಯಕ್ತಿಯೊಬ್ಬನ ಚಹರೆ ದಾಖಲಾಗಿತ್ತು. ಇದನ್ನು ಅನುಸರಿಸಿ ಪೊಲೀಸರು ಕಳ್ಳನ ಟ್ರೇಸ್ ಮಾಡಿದ್ದಾರೆ.

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *