ಚಾಮರಾಜನಗರ: ಚಾಮರಾಜನಗರ – ಗುಂಡ್ಲು ಪೇಟೆ ರಸ್ತೆಯಲ್ಲಿ ಯುವತಿಯನ್ನು ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಎದುರಾಗಿ ಕೂರಿಸಿಕೊಂಡು, ಹೆಲ್ಮೆಟ್ ಸಹ ಧರಿಸದೇ ಅಜಾಗರೂಕತೆಯಿಂದ ಜಾಲಿ ರೈಡ್ ಮಾಡಿ ತನ್ನ ಹುಚ್ಚಾಟ ಮೆರೆದಿದ್ದ ಯುವಕನನ್ನು ಪೊಲೀಸರು ಬೈಕ್ ಸಮೇತ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಶಿವಪುರ ಗ್ರಾಮದ ನಿವಾಸಿ ಎಸ್.ಸಿ. ಸ್ವಾಮಿ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿದ್ದ ಯುವಕನಾಗಿದ್ದಾನೆ. ಈತ ಏ. 21ರಂದು ಸಂಜೆ 4ಗಂಟೆ ಸಮಯದಲ್ಲಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ರಸ್ತೆಯ ಯಡಪುರ ಗ್ರಾಮದ ಬಳಿ ಪಲ್ಸರ್ ಬೈಕಿನ ಟ್ಯಾಂಕಿನ ಮೇಲೆ ಯುವತಿಯನ್ನು ತನ್ನ ಎದುರಾಗಿ ಕೂರಿಸಿಕೊಂಡು ಜಾಲಿ ರೈಡ್ ಮಾಡುತ್ತಿದ್ದ. ಅಲ್ಲದೇ ಹೆಲ್ಮೆಟ್ ಸಹ ಧರಿಸದೇ ಮನಬಂದಂತೆ ಬೈಕ್ ಓಡಿಸುತ್ತಿದ್ದ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಚಾಮರಾಜನಗರ ಸಂಚಾರಿ ಠಾಣೆ ಪೊಲೀಸರು,
ಈ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಬೈಕ್ ಸವಾರನ ಪತ್ತೆಗೆ ಕ್ರಮ ಕೈಗೊಂಡು, ಬೈಕ್ ನಂಬರ್ ಪರಿಶೀಲಿಸಿ ಅದರ ಸವಾರ ಎಚ್.ಡಿ.ಕೋಟೆ ತಾಲೂಕಿನ ನಿವಾಸಿ ಎಸ್.ಸಿ.ಸ್ವಾಮಿ ಎಂದು ತಿಳಿದು, ಆತನನ್ನು ಪತ್ತೆ ಹಚ್ಚಿ ಶುಕ್ರವಾರ ಬೈಕ್ ಸಮೇತ ವಶಕ್ಕೆ ಪಡೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

