ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ತನ್ನ ಓಲೈಕೆ ರಾಜಕಾರಣಕ್ಕೆ ಶಿಕ್ಷಣ ಕ್ಷೇತ್ರವನ್ನು ಬಳಕೆ ಮಾಡಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡನೀಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪಠ್ಯಪುಸ್ತಕವನ್ನು ಹಾಳುಗೆಡುವ ಕೆಲಸ ಮಾಡಿದೆ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಬರಬೇಕೆಂದು ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಡಪಂಥೀಯ ಬುದ್ದಿಜೀವಿಗಳ ಕೈಗೊಂಬೆಯಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತೆಗೆದು ಇದೀಗ ರಾಜ್ಯ ಶಿಕ್ಷಣ ನೀತಿ (ಎಸ್’ಸಿಪಿ) ಜಾರಿಗೆ ತರಲು ಮುಂದಾಗಿದ್ದಾರೆ. ಇದರಿಂದ ಶಿಕ್ಷಣ ಕ್ಷೇತ್ರ ಗೊಂದಲದ ಗೂಡಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಶ್ರೇಯಸ್ಸು ಎಂದು ಕಿಡಿಕಾರಿದರು.
ಈ ಹಿಂದೆ ನಾನು ಶಿಕ್ಷಣ ಸಚಿವ ಆಗಿದ್ದಾಗ ಪಠ್ಯಕ್ರಮ ಪರಿಷ್ಕರಣೆ ಮಾಡಿದ್ದಾಗ ಶಿಕ್ಷಣವನ್ನು ಕೇಸರಿಕರಣ ಮಾಡುತ್ತಿದ್ದಾರೆ ಎಂದು ಗೊಂದಲ ಸೃಷ್ಟಿ ಮಾಡಿ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ವಿರೋಧಿಸಿದರು. ಆಗ ಚರ್ಚೆ ನಡೆಸಿ ಅಂತಿಮವಾಗಿ ಪ್ರಕಟಿಸಿದ ಪಠ್ಯಕ್ರಮ ಒನ್ ಆಪ್ ಬೆಸ್ಟ್ ಪಠ್ಯಕ್ರಮ ಎಂದು ಹೇಳಲಾಯಿತು. ಬಳಿಕ ಸುಖಾಸುಮ್ಮನೆ ಕಾಂಗ್ರೆಸ್ ಚುನಾವಣೆಯಲ್ಲಿ ಪಠ್ಯಕ್ರಮವನ್ನು ರಾಜಕೀಯ ವಿಷಯವಾಗಿ ಎಳೆದು ತಂದಿದ್ದಾರೆ ಇದು ದುರಂತವಾಗಿದೆ ಎಂದರು.
ಆಧುನಿಕತೆಗೆ ತಕ್ಕಂತೆ ಮಕ್ಕಳು ಸಿದ್ದವಾಗಲು ಹೊಸ ಶಿಕ್ಷಣ ನೀತಿಯಿಂದ ರೂಪಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಆದರೆ ಸಿದ್ದರಾಮಯ್ಯ ಓಲೈಲೆ ರಾಜಕಾರಣಕ್ಕೆ ಮುಂದಾಗಿ ಎಸ್’ಸಿಪಿ ಅಂದರೆ ಸೋನಿಯಾಗಾಂಧಿ ಎಜ್ಯುಕೇಶನ್ ಸಿಸ್ಟಮ್ ಜಾರಿಗೊಳಿಸಲು ಹೊರಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರಿಗೆ ರಾಜ್ಯದ ಬಡಮಕ್ಕಳು ಅಭಿವೃದ್ಧಿ ಆಗುವುದು ಬೇಡವಾಗಿದೆ. ಸರ್ಕಾರಿ ಶಾಲೆಯಲ್ಲಿ ಬಡವರನ್ನು ಉನ್ನತ ಶಿಕ್ಷಣದಿಂದ ವಂಚಿತ ಮಾಡುವ ಷಡ್ಯಂತ್ರ ರಾಜ್ಯ ಸರ್ಕಾರ ಮಾಡುತ್ತಿದೆ. ಇದನ್ನು ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜ್ಯುಕೇಶನ್ ನಿಂದ ತೀವ್ರವಾಗಿ ಖಂಡಿಸಲಾಗುವುದು. ಈ ಬಗ್ಗೆ ರಾಜ್ಯಾದ್ಯಂತ ಅಭಿಯಾನ ಆರಂಭಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಮುಂದುವರೆಸಲು ಒತ್ತಡ ಹೇರಲಾಗುವುದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್’ನಿಂದ ಶ್ವೇಚಾಚಾರದ ಆಡಳಿತ: ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ ಇದೀಗ ಕನ್ನಡಿಗರ ಭಾವನೆಯನ್ನು ದಿಕ್ಕರಿಸಿ ಮನಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಇದೊಂದು ಶ್ವೇಚಾಚಾರದ ಸರ್ಕಾರ. ಸದ್ಯ ರಾಜ್ಯದ ಜನರು ತಲೆ ತಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಹರಿಹಾಯ್ದರು.
ಕಾನೂನು ಬಾಹಿರವಾಗಿ ಚಟುವಟಿಕೆ ಮಾಡಿ ಗಲಭೆ ಮಾಡಿದವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ. ಓಲೈಕೆಯ ರಾಜಕಾರಣದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಶಾಂತಿ ಕದಡುವ ಮನಸ್ಥಿತಿಯ ಜನರಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿದೆ. ಪ್ರತಿ ಹೆಜ್ಜೆಯಲ್ಲಿ ಕಾಂಗ್ರೆಸ್ ತಪ್ಪು ಮಾಡುತ್ತಿದೆ. ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ. ಇದು ರಾಜ್ಯದ ಅಭಿವೃದ್ಧಿಗೆ ಪೂರಕವಾಗುತ್ತದೆ. ಬರುವ ಲೋಕಸಭೆಯಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





