ಹುಬ್ಬಳ್ಳಿ: ನರಗುಂದ- ನವಲಗುಂದ 42 ನೇ ವರ್ಷದ ಹುತಾತ್ಮರ ದಿನಾಚರಣೆ ಅಂಗವಾಗಿ ಜುಲೈ 21 ರಂದು ನವಲಗುಂದ ಪಟ್ಟಣದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರಗುಂದ-ನವಲಗುಂದ ರೈತರ ಮೇಲೆ42 ವರ್ಷಗಳ ಹಿಂದೆ ಅಮಾನುಷ ದೌರ್ಜನ್ಯ ನಡೆದಿತ್ತು. ಇದರ ವಿರುದ್ಧ ರೈತರು ನಿರಂತರವಾಗಿ ಹೋರಾಟ ಮಾಡುತ್ತಲೇ ಬರುತ್ತಿದೆ. ಈ ಹೋರಾಟದಲ್ಲಿ 153 ರೈತರು ಪೋಲಿಸರ ಗುಂಡೆಟ್ಟಿಗೆ ಬಲಿಯಾಗಿದ್ದರು. ಅಲ್ಲದೇ ಇತ್ತಿಚೆಗೆ ದೇಶದಲ್ಲಿ 10 ಲಕ್ಷ ಹಾಗೂ ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ರೈತರು ಹಲವಾರು ಕಾರಣದಿಂದ ಸಾವನ್ನಪ್ಪಿದ್ದಾರೆ. ಸರ್ಕಾರಗಳು ರೈತರ ಮಾರಣಹೋಮ ಮಾಡುತ್ತಲೇ ಇದೆ. ಈ ಕಾರಣದಿಂದ ಎಲ್ಲ ರೈತರನ್ನು ಒಗ್ಗೂಡಿಸುವುದು ಜೊತೆಗೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನು ಸಮಾವೇಶದಲ್ಲಿ ರೈತ ವಿರೋಧಿ 3 ಕೃಷಿ ಕಾಯಿದೆಯನ್ನು ರಾಜ್ಯ ಸರ್ಕಾರ ವಾಪಾಸ್ ಪಡೆಯುವುದು, ಅತಿವೃಷ್ಟಿ, ಅನಾವೃಷ್ಟಿಗೆ ಒಳಗಾದ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸುವುದು, ರೈತರ ಸಾಲಮನ್ನಾ ಮಾಡುವುದು, ರೈತರ ಬೆಳೆಗಳಿಗೆ ಯೋಗ್ಯ ಬೆಲೆ ನೀಡುವುದು, ಮಹದಾಯಿ ಕಳಸಾ ಬಂಡೂರಿ ಯೋಜನೆಯನ್ನು ಜಾರಿ ಕುರಿತು, ರಾಜ್ಯದಲ್ಲಿ ಸಮಗ್ರ ನೀರಾವರಿ ಯೋಜನೆ ಜಾರಿ ಮಾಡವುದು, ಬಗರ್ ಹುಕ್ಕುಂ ಸಾಗುವಳಿಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಸೇರಿದಂತೆ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಗುವುದು. ಅಲ್ಲದೇ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ವಾಲಿ, ಶಂಕರಣ್ಣ ಅಂಬಲಿ, ಮಧುಸೂದನ್ ತಿವಾರಿ, ಶಿವಾನಂದ ಹೊಡೆಹಗಲಗಿ, ಶಂಕರಗೌಡ ಪಾಟೀಲ್ ಸೇರಿದಂತೆ ಮುಂತಾದವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





