ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ನೈಋುತ್ಯ ಮುಂಗಾರು ಭರ್ಜರಿ ಮಳೆ ಸುರಿಸಿದೆ. ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.20ರಷ್ಟು ಹೆಚ್ಚು ಮಳೆಯಾಗಿದೆ. ರಾಜ್ಯದ ಯಾವುದೇ ಜಿಲ್ಲೆ ಮತ್ತು ತಾಲೂಕಿನಲ್ಲಿ ಮಳೆಯ ಕೊರತೆ ಆಗಿಲ್ಲ.
ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದೆ. ರಾಜ್ಯದ ವಾಡಿಕೆಯ ಮುಂಗಾರು ಮಳೆಯ ಪ್ರಮಾಣ 85.2 ಸೆಂ.ಮೀ. ಇದೆ. ಆದರೆ ಈ ಬಾರಿ 100.19 ಸೆಂ.ಮೀ. ಮಳೆ ಸುರಿಯುವ ಮೂಲಕ ಸುಮಾರು ಶೇ. 20ರಷ್ಟು ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಈ ಬಾರಿ 101.02 ಸೆಂ.ಮೀ. ಮಳೆ (ವಾಡಿಕೆ ಮಳೆ 67.84), ಉತ್ತರ ಒಳನಾಡಿನಲ್ಲಿ 65.11 ಸೆಂ.ಮೀ. ಮಳೆ (ವಾಡಿಕೆ ಮಳೆ 48.08) ಹಾಗೂ ಕರಾವಳಿಯಲ್ಲಿ 323.28 ಸೆಂ.ಮೀ. (ವಾಡಿಕೆ ಮಳೆ 307.55) ಮಳೆಯಾಗಿದೆ.
ಸಾಮಾನ್ಯವಾಗಿ ಅತಿ ಹೆಚ್ಚು ಮಳೆಯಾಗುವ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಯಷ್ಟೆ ಮಳೆ ಆಗಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ. 49ರಷ್ಟುಹೆಚ್ಚು ಮಳೆ ಸುರಿದಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ. 34ರಷ್ಟು ಹೆಚ್ಚು ಮಳೆಯಾಗಿದೆ. 8 ಜಿಲ್ಲೆಯಲ್ಲಿ ಅತಿ ಹೆಚ್ಚು (ವಾಡಿಕೆಗಿಂತ ಶೇ. 60ಕ್ಕಿಂತ ಹೆಚ್ಚು), 12 ಜಿಲ್ಲೆಯಲ್ಲಿ ಹೆಚ್ಚು (ವಾಡಿಕೆಗಿಂತ ಶೇ.20ರಿಂದ ಶೇ.59 ಹೆಚ್ಚು), 11 ಜಿಲ್ಲೆಯಲ್ಲಿ (ವಾಡಿಕೆಗಿಂತಶೇ. -19ರಿಂದ ಶೇ. 19) ಮಳೆಯಾಗಿದೆ. ಅತಿ ಹೆಚ್ಚು ಮಳೆ ಪಡೆದ ಎಲ್ಲ ಜಿಲ್ಲೆಗಳು ದಕ್ಷಿಣ ಒಳನಾಡಿನಲ್ಲಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

