ಬೆಂಗಳೂರು: ಹಸಿರು ಇಂಧನ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ʼಸೋಲಾರ ರೂಫ್ ಟಾಪ್ ಹಂತ-02ʼ ಯೋಜನೆಗೆ ಬೆಸ್ಕಾಂ ಚಾಲನೆ ನೀಡಿದ್ದು, ಗ್ರಾಹಕರು ತಮ್ಮ ಮನೆಯ ಮೇಲ್ಛಾವಣಿಗಳಲ್ಲಿ ಸೋಲಾರ್ ಘಟಕಗಳ ಅಳವಡಿಕೆಗೆ ಉತ್ಸುಕರಾಗಿದ್ದಾರೆ.
ಭಾರತ ಸರ್ಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯು ಸೌರ ಘಟಕಗಳ ಸ್ಥಾಪನೆಗಾಗಿ, ಬೆಸ್ಕಾಂಗೆ 10 ಮೆಗಾ ವ್ಯಾಟ್ ಸಾಮರ್ಥ್ಯವನ್ನು ಹಂಚಿಕೆ ಮಾಡಿದ್ದು, ಯೋಜನೆಯಡಿಯಲ್ಲಿ ಸೋಲಾರ್ ಘಟಕಗಳನ್ನು ಅಳವಡಿಸಿಕೊಳ್ಳಲು ಬೆಸ್ಕಾಂಗೆ 1500 ಅರ್ಜಿಗಳು ಸಲ್ಲಿಕೆಯಾಗಿವೆ. ʼಸೌರ ಗೃಹʼ ಹೆಸರಿನಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಗ್ರಾಹಕರು ಪಡೆದಿರುವ ವಿದ್ಯುತ್ ಸಾಮರ್ಥ್ಯಕ್ಕೆ ಅನುಗುಣವಾಗಿ ಸೋಲಾರ್ ಘಟಕಗಳನ್ನು ಅಳವಡಿಸಿ, ಸೌರ ವಿದ್ಯುತ್ ಅನ್ನು ಬಳಸಿಕೊಂಡು ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ಮಾರಾಟ ಮಾಡಿ ಹಣಗಳಿಸುವ ಮಹತ್ವದ ಯೋಜನೆ ಇದಾಗಿದೆ. ಇದಕ್ಕಾಗಿ ನೆಟ್ ಮೀಟರ್ ಅನ್ನು ಗ್ರಾಹಕರು ಅಳವಡಿಸಿಕೊಳ್ಳಬೇಕಾಗುತ್ತದೆ. ಯೋಜನೆಯನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ ಕಾರ್ಯಗತಗೊಳಿಸಲು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರು ಇತ್ತೀಚೆಗೆ ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

