ಹನೂರು:- ತಾಲೂಕಿನ ಚಿಕ್ಕಮಾಲಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಗ್ಗಲಿಗುಂದಿ ಗ್ರಾಮದಲ್ಲಿ ಸೋಮವಾರ ರಾತ್ರಿ ಮನೆ ಮುಂದೆ ಕುಳಿತಿದ್ದ ಬಾಲಕಿಯೊಬ್ಬಳ ಮೇಲೆ ಚಿರತೆಯೊಂದು ದಾಳಿ ನಡೆಸಿ ಗಾಯಗೊಳಿಸಿದೆ.
ಕಗ್ಗಲಿಗುಂದಿ ಗ್ರಾಮವು ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿದೆ.
ಸೋಮವಾರ ರಾತ್ರಿ 7:30 ರ ಸಮಯದಲ್ಲಿ ಘಟನೆ ನಡೆದಿದೆ. ಗ್ರಾಮದ ರಾಮು ಹಾಗೂ ಅವರ ಮಗಳು ಸುಶೀಲಾ ಮನೆಯ ಮುಂಭಾಗ ಕುಳಿತಿದ್ದರು. ಮನೆ ಬಳಿಗೆ ಬಂದ ಚಿರತೆಯು ರಾಮು ಮೇಲೆ ದಾಳಿ ಮಾಡಲು ಯತ್ನಿಸಿದೆ. ಅವರು ಜೋರಾಗಿ ಕಿರುಚಿದಾಗ, ಅವರನ್ನು ಬಿಟ್ಟು ಪಕ್ಕದಲ್ಲಿದ್ದ ಸುಶೀಲಾ ಮೇಲೆ ದಾಳಿ ಮಾಡಿ ಎಳೆದೊಯ್ಯಲು ಯತ್ನಿಸಿದೆ. ರಾಮು ಅವರು ಜೋರಾಗಿ ಕಿರುಚಿಕೊಂಡಾಗ ಚಿರತೆ ಬಾಲಕಿಯನ್ನು ಬಿಟ್ಟು ಓಡಿದೆ.
ಬಾಲಕಿಯ ಬಾಯಿ ಹಾಗೂ ಗಂಟಲಿನ ಭಾಗದಲ್ಲಿ ಚಿರತೆ ಬಲವಾಗಿ ಕಚ್ಚಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಆಕೆಯನ್ನು ಸಮೀಪದ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





