ಶಿರಸಿ (ಉತ್ತರಕನ್ನಡ): ಹಿಂದಿನ ಬಿಜೆಪಿ ಅಧಿಕಾರವಧಿಯಲ್ಲಿ ಶಿರಸಿಗೆ ಮಂಜೂರು ಮಾಡಿದ್ದ ಸಂಚಾರ ಪೊಲೀಸ್ ಠಾಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಶಿರಸಿ ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದ್ದು, ನಗರ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ.
ವಾಣಿಜ್ಯ ನಗರ ಶಿರಸಿ ಪಟ್ಟಣದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಏಕಮುಖ ಸಂಚಾರ ವ್ಯವಸ್ಥೆ ಅನುಷ್ಠಾನದಲ್ಲಿನ ದೋಷಗಳು ಸಂಚಾರ ದಟ್ಟಣೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಜತೆಗೆ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ 2023ರ ಫೆಬ್ರವರಿಯಲ್ಲಿ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಲಾಗಿತ್ತು.
ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಉತ್ತರಕನ್ನಡ ಜಿಲ್ಲೆಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ, ವಾಣಿಜ್ಯ ಹಾಗೂ ಸಾಂಸ್ಕೃತಿಕವಾಗಿ ಬೆಳೆಯುತ್ತಿರುವ ತಾಲೂಕು ಶಿರಸಿ. ಇಲ್ಲಿಯ ಜನಜೀವನಕ್ಕೆ ಅಗತ್ಯವಿರುವಂತಹ ಅನೇಕ ಸಂಗತಿಗಳನ್ನು ನಾನು ಮಂಜೂರು ಮಾಡಿಸಿದ್ದೇನೆ. ಕೆಲವು ವಿವಿಧ ಹಂತಗಳಲ್ಲಿ ಕುಂಟುತ್ತಾ ಸಾಗುತ್ತಿವೆ. ಈ ಪೈಕಿ ಸಂಚಾರಿ ಪೊಲೀಸ್ ಠಾಣೆ ಬಹುಮುಖ್ಯವಾದದ್ದು. ಶಿರಸಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಂಥ ನಗರ ಗ್ರಾಮೀಣ ಪ್ರದೇಶದಲ್ಲಿ ಸ್ವಂತ ವಾಹನ ಬಳಸಬೇಕಾದ ಸ್ಥಿತಿ ಜನರದ್ದು.
ಜನಸಂಖ್ಯೆ ಹೆಚ್ಚಿರುವುದರಿಂದ ವಾಹನ ದಟ್ಟಣೆಯ ಪ್ರಮಾಣ ಶಿರಸಿಯಲ್ಲಿ ಜಾಸ್ತಿ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಯನ್ನು ನಾನು ಮಂಜೂರು ಮಾಡಿಸಿದ್ದೆ. ಈಗ ಅದು ಅನುಷ್ಠಾನಕ್ಕೆ ಬರಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ, ಇಲ್ಲಿನ ಸ್ಥಳೀಯ ಶಾಸಕರು ಅನುಷ್ಠಾನಕ್ಕೆ ಬೇಕಾದ ಇಚ್ಛಾಶಕ್ತಿ ತೋರಿಸಿ ಶಿರಸಿ ನಗರದ ಮುಕ್ತ ಸಂಚಾರದ ಅವಕಾಶವನ್ನು ಇಲ್ಲಿಯ ಜನರಿಗೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸುತ್ತೇನೆ ಎಂದರು.ರಾಜಕಾರಣದ ದೃಷ್ಟಿಯಿಂದ ಈ ಅಭಿವೃದ್ಧಿ ಕೆಲಸ ಕಾರ್ಯವನ್ನು ನೋಡದೆ, ಜನತೆಯ ಅಗತ್ಯಕ್ಕೆ ಮಾಡಿಸಿರುವ ಈ ಅಭಿವೃದ್ಧಿ ಕೆಲಸಗಳ ಅನುಷ್ಠಾನ ತೀವ್ರಗತಿಯಲ್ಲಿ ಆಗಬೇಕೆಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





