ರಾಮನಗರ: ಕನಕಪುರಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿಸಿ ಇಂದು ಕರೆ ನೀಡಿದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ.
ವಿವಿಧ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬಂದ್‌ಗೆ ಕರೆ ನೀಡಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಮನಗರ ಜನತೆ ಸ್ವಯಂಪ್ರೇರಣೆಯಿಂದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ, ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ನಮಗೆ ಬೇಕು ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.
ಇಂದು ಮುಂಜಾನೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಬಂದ್ ಮಾಡಿದ್ದಾರೆ. ಟೀ ಅಂಗಡಿಗಳು, ಸಣ್ಣ ಪುಟ್ಟ ಹೋಟೆಲ್ಗಳಿಗೆ ಸಹ ಬೀಗ ಹಾಕಿ ಬಂದ್‌ಗೆ ಸಹಕಾರ ನೀಡಿದ್ದಾರೆ. ಇದರ ಜತೆಗೆ ರಾಮನಗರ ಎಪಿಎಂಸಿ ಮಾರುಕಟ್ಟೆ, ರೇಷ್ಮೆ ಗೂಡಿನ ಮಾರುಕಟ್ಟೆಗಳು ಸಹ ತಮ್ಮ ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿವೆ. ಸ್ವಯಂಪ್ರೇರಿತರಾಗಿ ವರ್ತಕರು, ವ್ಯಾಪಾರಿಗಳು, ದಲ್ಲಾಳಿಗಳು ಹಾಗೂ ರೈತರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲೆಗಳು ಸಹ ಬಂದ್ ಬಂಬಲಿಸಿ ರಜೆ ಘೋಷಣೆ ಮಾಡಿದ್ದರೆ, ಸಾರಿಗೆ ಸಂಚಾರ ಸಹ ಸಂಪೂರ್ಣವಾಗಿ ನಿಂತು ನಗರದ ರಸ್ತೆಗಳು ಬಿಕೋ ಎನ್ನುತ್ತಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





