Breaking News
Featured Video Play Icon

ಶೂನ್ಯ ಟಿಕೆಟ್ ವಿತರಣೆಯಿಂದ ಸಾರಿಗೆ ಸಂಸ್ಥೆಗೆ ಸಂಕಷ್ಟ: 300 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ…

ಹುಬ್ಬಳ್ಳಿ: ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಾರಿಗೆ ಸಂಸ್ಥೆ, ಗ್ಯಾರಂಟಿ ಯೋಜನೆ ಜಾರಿಯಾದಾಗಿನಿಂದಲೂ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗುತ್ತಿದೆ. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಕರ್ನಾಟಕ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮರು ಪಾವತಿಸಬೇಕಾದ ಮೊತ್ತದಲ್ಲಿ ರಾಜ್ಯ ಸರ್ಕಾರ 298,95,81,254 ರೂ. ಬಾಕಿ ಉಳಿಸಿಕೊಂಡಿದೆ… 2023ರ ಜೂನ್ 11ರಂದು ಈ ಯೋಜನೆ ಜಾರಿಗೆ ಬಂದಿತ್ತು. ಅಂದಿನಿಂದ ಇಲ್ಲಿಯವರೆಗೆ (2024ರ ಮಾರ್ಚ್ ಹೊರತುಪಡಿಸಿ) ಯಾವುದೇ ತಿಂಗಳು ಸಹ ರಾಜ್ಯ ಸರ್ಕಾರ ಪೂರ್ಣ ಮೊತ್ತವನ್ನು ಮರು ಪಾವತಿ ಮಾಡಿಲ್ಲ. ಇದರ ಪರಿಣಾಮವಾಗಿ ಬಾಕಿ 300 ಕೋಟಿ ರೂ. ಸಮೀಪ ಬಂದು ಮುಟ್ಟಿದೆ. ಯೋಜನೆ ಆರಂಭದಿಂದ ಈ ವರ್ಷದ ಏಪ್ರಿಲ್ ಅಂತ್ಯದವರೆಗೆ ಮಹಿಳೆಯರಿಗೆ 46,42,11,425 ಶೂನ್ಯ ಟಿಕೆಟ್ ವಿತರಿಸಲಾಗಿದೆ. ಇದರ ಒಟ್ಟು ಪ್ರಯಾಣ ವೆಚ್ಚ 1193,86,33,524 ರೂ. ಗಳಾಗಿವೆ. ಇದರಲ್ಲಿ ರಾಜ್ಯ ಸರ್ಕಾರ, ವಾಕರಸಾ ಸಂಸ್ಥೆಗೆ ಇಲ್ಲಿಯವರೆಗೆ 894,90,52,000 ರೂ. ಪಾವತಿ ಮಾಡಿದೆ.ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ, ವಾಕರಸಾ ಸಂಸ್ಥೆಗೆ ಮರು ಪಾವತಿಯಲ್ಲಿ ಪ್ರತಿ ತಿಂಗಳು 15ರಿಂದ 40 ಕೋಟಿ ರೂ. ವರೆಗೆ ಬಾಕಿ ಉಳಿಸಿಕೊಳ್ಳುತ್ತ ಬಂದಿದೆ. ಆದರೆ, ಮಾರ್ಚ್ ತಿಂಗಳಲ್ಲಿ ಶೂನ್ಯ ಟಿಕೆಟ್ ಮೊತ್ತಕ್ಕಿಂತ ಹೆಚ್ಚಿನ ಹಣ ಮರು ಪಾವತಿ ಮಾಡಿರುವುದು ವಿಶೇಷ. ಎರಡು ಕಂತುಗಳಲ್ಲಿ 157.36 ಕೋಟಿ ರೂ. ಪಾವತಿಸಿತ್ತು. ಆರ್ಥಿಕ ವರ್ಷದ ಕೊನೆಯ ತಿಂಗಳು ಎಂಬುದು ಇದಕ್ಕೆ ಕಾರಣ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.ಇತ್ತೀಚಿನ ತಿಂಗಳಲ್ಲಿ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಏಪ್ರಿಲ್ ತಿಂಗಳು ಹೊರತು ಪಡಿಸಿ ಶೂನ್ಯ ಟಿಕೆಟ್ ಮೊತ್ತದಲ್ಲೂ ಗಮನಾರ್ಹ ಏರಿಕೆ ಏನೂ ಆಗಿಲ್ಲ. ಸಮಾಧಾನಕರ ಸಂಗತಿಯೆಂದರೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳ ಮರು ಪಾವತಿ ಮೊತ್ತ ಏರಿಕೆಯಾಗಿರುವುದು. ಏಪ್ರಿಲ್ ತಿಂಗಳಲ್ಲಿ ಅತ್ಯಧಿಕ 102.68 ಕೋಟಿ ರೂ. ಪಾವತಿಸಿದೆ. ಮೇ ತಿಂಗಳು ಮುಗಿಯುವ ಮೊದಲೇ 102.68 ಕೋಟಿ ರೂ. ಪಾವತಿಸಿರುವುದು ಗಮನಾರ್ಹ ಅಂಶವಾಗಿದೆ.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *