ನವದೆಹಲಿ: ಸ್ವಚ್ಛ ಭಾರತ ಅಭಿಯಾನಕ್ಕೆ 10 ವರ್ಷ ತುಂಬಿದ ಸಂದರ್ಭದಲ್ಲಿ ಈ ಅಭಿಯಾನದ ಮುಂದಿನ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಿಷನ್ ಅಮೃತ ಯೋಜನೆಯನ್ನು ಘೋಷಿಸಿದರು.
ಮಿಷನ್ ಅಮೃತ ಯೋಜನೆಯ ಮೂಲಕ ದೇಶದಾದ್ಯಂತ ಇರುವ ನಗರಗಳಲ್ಲಿನ ಕೊಳಚೆ ನೀರಿನ ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಎರಡು ಭಾಗಗಳಿರಲಿವೆ. ಒಂದು ಅಮೃತ ಮತ್ತೊಂದು ಅಮೃತ 2.0, ಇದಕ್ಕಾಗಿ ₹6,800 ಕೋಟಿ ಮೀಸಲಿಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ದೇಶದ 60 ಸಾವಿರದಿಂದ 70 ಸಾವಿರ ಮಕ್ಕಳ ಜೀವವನ್ನು ಸ್ವಚ್ಛ ಭಾರತ ಯೋಜನೆಯು ಉಳಿಸಿದೆ ಎಂದು ಅಂತರರಾಷ್ಟ್ರೀಯ ವರದಿಯೊಂದು ಹೇಳಿದೆ. ಜೊತೆಗೆ, ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿರುವ ಕಾರಣ ಭಾರತದ ಶೇ 90ರಷ್ಟು ಮಹಿಳೆಯರು ತಾವು ಸುರಕ್ಷಿತ ಎಂಬ ಭಾವನೆ ತಳೆದಿದ್ದಾರೆ ಎಂದು ಯುನಿಸೆಫ್‌ನ ವರದಿ ಹೇಳಿದೆ ಎಂದು ಸ್ವಚ್ಛ ಭಾರತ ಯೋಜನೆಯನ್ನು ಪ್ರಧಾನಿ ಶ್ಲಾಘಿಸಿದರು. ದೇಶದಲ್ಲಿ ಸ್ವಚ್ಛತೆ ಮೂಡಿರುವುದರಿಂದ ಡಯೇರಿಯಾ ರೋಗದಿಂದ ಮೃತಪಡುತ್ತಿದ್ದವರ ಸಂಖ್ಯೆ ಇಳಿಕೆಯಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, 2014ರಿಂದ 2019ರವರೆಗೆ ಸುಮಾರು 3 ಲಕ್ಷ ಜೀವಗಳು ಉಳಿದಿವೆ ಎಂದು ಮೋದಿ ಹೇಳಿದರು.
ಮಲಗುಂಡಿ ಸ್ವಚ್ಛತೆಯಿಂದಾಗಿ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಸ್ವಚ್ಛತೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಈ ತಂತ್ರಜ್ಞಾನ ಅಭಿವೃದ್ಧಿಗಾಗಿ ಸುಮಾರು 5 ಸಾವಿರ ಸ್ಟಾರ್ಟ್‌ಅಪ್ ಕಂಪನಿಗಳು ನೋಂದಾಯಿಸಿಕೊಂಡಿವೆ ಎಂದರು.
ನಮಾಮಿ ಗಂಗೆ ಯೋಜನೆ ಅಡಿಯಲ್ಲಿ ಗಂಗಾ ನದಿ ತೀರದ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸ್ವಚ್ಛತೆ ಹಾಗೂ ತಾಜ್ಯ ನಿರ್ವಹಣೆಗಾಗಿ ₹1,500 ಕೋಟಿ ಹಾಗೂ ಗೋಬರ್‌ಧನ ಯೋಜನೆ ಅಡಿಯಲ್ಲಿ 15 ಸಾಂದ್ರೀಕೃತ ಜೈವಿಕ ಅನಿಲ (ಸಿಬಿಜಿ) ಘಟಕ ಸ್ಥಾಪನೆಗೆ ₹1,332 ಕೋಟಿ ಅನುದಾನ ನೀಡುವುದಾಗಿ ಇದೇ ಸಮಾರಂಭದಲ್ಲಿ ಪ್ರಧಾನಿ ಘೋಷಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

