ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ಮತ್ತು ಪತ್ರಕರ್ತರಿಗಾಗಿ 2,756 ಕೊಠಡಿ ಕಾಯ್ದಿರಿಸಿದ್ದೇವೆ. ಇದಕ್ಕಾಗಿ ಪ್ರವಾಸಿ ಮಂದಿರಗಳು, ಖಾಸಗಿ ಹೋಟೆಲ್‌ಗಳು ಮತ್ತು ವಿವಿಧ ಸಂಸ್ಥೆಗಳ ಅತಿಥಿ ಗೃಹಗಳನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ವಸತಿಗಾಗಿ ವಿಧಿಸಿದ್ದ ದರವನ್ನೇ ಈ ಬಾರಿಯೂ ಮುಂದುವರಿಸುವಂತೆ ಕೋರಿದ್ದೇವೆ. ಇದಕ್ಕೆ ಎಲ್ಲ ಹೊಟೇಲ್ ಮಾಲೀಕರು ಒಪ್ಪಿದ್ದಾರೆ. ಅಧಿವೇಶನ ಸುಗಮವಾಗಿ ನಡೆಸಲು 10 ಸಮಿತಿ ರಚಿಸಿದ್ದೇವೆ ಎಂದು ಹೇಳಿದರು.
ವಿವಿಧ ಬೇಡಿಕೆ ಹೊತ್ತು ಜನಪ್ರತಿನಿಧಿಗಳ ಭೇಟಿಗಾಗಿ ಸುವರ್ಣ ವಿಧಾನಸೌಧಕ್ಕೆ ಬರುತ್ತಿದ್ದ ಜನರು ಹಿಂದಿನ ವರ್ಷಗಳಲ್ಲಿ ಪಾಸ್‌ಗಾಗಿ ಪರದಾಡಬೇಕಿತ್ತು. ಈ ಸಲ ಆನ್‌ಲೈನ್ ಮೂಲಕವೇ ಅವರಿಗೆ ಪಾಸ್ ನೀಡುವ ವ್ಯವಸ್ಥೆ ಮಾಡಿದ್ದೇವೆ. ಪಾಸ್ ನೀಡಲು ಜನಪ್ರತಿನಿಧಿಗಳ ಸಿಬ್ಬಂದಿಗೆ ಪ್ರತ್ಯೇಕ ಪೋರ್ಟಲ್ ರಚಿಸಿದ್ದೇವೆ ಎಂದು ತಿಳಿಸಿದರು.
ಕಲಾಪ ವೀಕ್ಷಿಸಲು ಬರುವ ಜನರಿಗೆ ಅನುಕೂಲವಾಗಲೆಂದು ಎಂಟು ಕಡೆ ಪಾವತಿ ಆಧಾರದಲ್ಲಿ ಕ್ಯಾಂಟೀನ್ ವ್ಯವಸ್ಥೆ ಮಾಡುತ್ತಿದ್ದೇವೆ. ವಿವಿಧ ಬಗೆಯ 38 ಮಳಿಗೆ ತೆರೆಯಲು ಅವಕಾಶ ಮಾಡಿಕೊಟ್ಟಿದ್ದೇವೆ. ಅಲ್ಲಿ ಕುಂದಾ ಸೇರಿದಂತೆ ಉತ್ತರ ಕರ್ನಾಟಕದ ಸಿಹಿ ತಿನಿಸುಗಳ ಮಾರಾಟವಾಗಲಿವೆ’ ಎಂದು ಹೇಳಿದರು.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಡಿ.26, 27ರಂದು ನಡೆಯಲಿದೆ. ಆದರೆ, ಅಧಿವೇಶನ ನಡೆದ ಸ್ಥಳವಾದ ವೀರಸೌಧ ಸೇರಿದಂತೆ ಬೆಳಗಾವಿ ಮಹಾನಗರದ 30 ವೃತ್ತಗಳಿಗೆ ಡಿ.9ರಿಂದಲೇ ಮೈಸೂರು ದಸರಾ ಮಾದರಿಯಲ್ಲಿ ವಿದ್ಯುದ್ದೀಪಗಳಿಂದ ಅಲಂಕಾರ ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಕೈಗೊಳ್ಳಲಿರುವ ಯೋಜನೆಗಳ ಕ್ರಿಯಾ ಯೋಜನೆಗೆ ಸಂಬಂಧಿಸಿದ ₹24 ಕೋಟಿ ವೆಚ್ಚದ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ಕೊಟ್ಟಿದ್ದಾರೆ. ಹಂತ-ಹಂತವಾಗಿ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದರು.
ಬೇರೆ ಕಡೆಗಳಿಂದ ಬರುವ ಅಧಿಕಾರಿಗಳು ಪಾರ್ಟಿ ಕೊಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಒತ್ತಡ ಹೇರುತ್ತಿರುವ ಮತ್ತು ಪಾರ್ಟಿಗಾಗಿ ಹಣ ಸಂಗ್ರಹಿಸುತ್ತಿರುವ ಆರೋಪ ಅಲ್ಲಗಳೆದರು.
ನಗರ ಪೋಲಿಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ‘ಈ ಸಲದ ಅಧಿವೇಶನದಲ್ಲಿ 6 ಎಸ್‌ಪಿಗಳು, 10 ಹೆಚ್ಚುವರಿ ಎಸ್‌ಪಿಗಳು ಸೇರಿದಂತೆ ಭದ್ರತೆಗಾಗಿ 6,023 ಪೊಲೀಸರನ್ನು ನಿಯೋಜಿಸಲಾಗುತ್ತಿದೆ. 30 ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





