ನವದೆಹಲಿ: ಅಂಚೆ ಇಲಾಖೆಯನ್ನು ಸಂಪೂರ್ಣ ಡಿಜಿಟಲ್ ವೇದಿಕೆಯನ್ನಾಗಿ ಪರಿವರ್ತಿಸುವ ಸಲುವಾಗಿ ವ್ಯಾಪಾರ ಪ್ರಕ್ರಿಯೆ ಪುನಾರಚನೆ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಭಾರತೀಯ ಅಂಚೆ ಮತ್ತು ದೂರಸಂಪರ್ಕ ಖಾತೆ ಹಾಗೂ ಹಣಕಾಸು ಸೇವೆಯ 50ನೇ ಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಚೆ ಸೇವೆಯೆಂದರೆ ಜನಸೇವೆ.
ಇ-ಕಾಮರ್ಸ್ ವಲಯದ ಬೆಳವಣಿಗೆಯ ಸಂದರ್ಭದಲ್ಲಿ ಇಲಾಖೆಯ ಈ ಪರಿವರ್ತನೆಯು ಅಗತ್ಯವಾಗಿದ್ದು ಈ ಹೊಸ ವ್ಯಾಪಾರ ಮಾರ್ಗದಲ್ಲಿ ಅಂಚೆ ಸೇವೆಗಳ ಪ್ರಸ್ತುತತೆಯನ್ನು ಉಳಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಸರಕುಸಾಗಣೆ ನಿಗಮವಾಗಿ (ಲಾಜಿಸ್ಟಿಕ್ಸ್ ಕಾರ್ಪೆರೇಷನ್) ಅಂಚೆ ಇಲಾಖೆ ಪರಿವರ್ತನೆಯಾಗಲಿದೆ. ಈ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಸಂಸ್ಥೆಯಾಗಲಿದೆ. 1.64 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿರುವ ಇಲಾಖೆ ಈಗಾಗಲೇ ಜಗತ್ತಿನ ಅತಿ ದೊಡ್ಡ ವಿತರಣಾ ಜಾಲ ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮೀಣ ಅಂಚೆ ಸಿಬ್ಬಂದಿ ಈಗಲೂ ಮನೆ ಮನೆಗೆ ಭೇಟಿ ನೀಡುತ್ತಾರೆ’ ಎಂದು ವಿವರಿಸಿದರು.
ದೂರಸಂಪರ್ಕ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಲ್ಲಿ ಆಗಿರುವ ಸಾಧನೆಯನ್ನು ಸಚಿವರು ಮೆಲುಕು ಹಾಕಿದರು. ‘ಕಳೆದ 10 ವರ್ಷಗಳ ಹಿಂದೆ 25 ಕೋಟಿಯಷ್ಟಿದ್ದ ಇಂಟರ್ನೆಟ್ ಸಬ್ಸ್ಕ್ರೈಬರ್ಗಳ ಸಂಖ್ಯೆ ಈಗ 95 ಕೋಟಿಗೆ ತಲುಪಿದೆ. ದಿನಕ್ಕೆ 1 ಜಿಬಿ ಡೇಟಾ ಮಾತ್ರ ಖರ್ಚು ಮಾಡುತ್ತಿದ್ದ ಜನರು ಈಗ 20 ಜಿಬಿ ಡೇಟಾ ಬಳಸುತ್ತಿದ್ದಾರೆ. ಬ್ರಾಡ್ಬ್ಯಾಂಡ್ ಸಬ್ಸ್ಕ್ರೈಬರ್ಗಳ ಸಂಖ್ಯೆ 6 ಕೋಟಿಯಿಂದ 92 ಕೋಟಿಗೆ ಮುಟ್ಟಿದೆ. 4ಜಿ ಕಾಲದಲ್ಲಿ ಜಗತ್ತನ್ನು ಭಾರತ ಹಿಂಬಾಲಿಸಿತ್ತು. 5ಜಿ ಕಾಲದಲ್ಲಿ ಜಗತ್ತಿನ ಜತೆ ಭಾರತ ಹೆಜ್ಜೆ ಹಾಕಿತು. 6ಜಿ ಕಾಲಘಟ್ಟದಲ್ಲಿ ಭಾರತವು ಜಗತ್ತನ್ನು ಮುನ್ನಡೆಸಲಿದೆ’ ಎಂದರು. ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಪ ಧನಕರ್ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

