Breaking News

ಕಲಬುರಗಿ ನಗರ ಬಹುತೇಕ ಸ್ತಬ್ಧ: ಟೈರ್ ಗಳಿಗೆ ಬೆಂಕಿ, ವಾಹನಗಳ ಸಂಚಾರ ಬಂದ್

ಕಲಬುರಗಿ: ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆ ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ ನೇತೃತ್ವದಲ್ಲಿ ‌ವಿವಿಧ ದಲಿತ, ಪ್ರಗತಿಪರ ಸಂಘಟನೆಗಳು, ಎಡಪಕ್ಷಗಳು ಕರೆ ನೀಡಿರುವ ಕಲಬುರಗಿ ಬಂದ್ ಪರಿಣಾಮ ನಗರ ಸ್ತಬ್ಧವಾಗಿದೆ.
ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರು ನಗರದ ಜೇವರ್ಗಿ ರಸ್ತೆ, ಸೇಡಂ ರಸ್ತೆ, ಹುಮನಾಬಾದ್ ರಸ್ತೆ, ಆಳಂದ ಹಾಗೂ ಅಫಜಲಪುರದಿಂದ ನಗರಕ್ಕೆ ಸೇರುವ ರಸ್ತೆಗಳ ಮೇಲೆ ದಿಗ್ಬಂಧನ ವಿಧಿಸಿದ್ದರಿಂದ ನಗರದ ಹೊರಭಾಗದಲ್ಲಿಯೇ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.
ಅವರನ್ನು ಕರೆತರಲು ಸಂಬಂಧಿಕರು ಬೈಕ್, ಕಾರಿನಲ್ಲಿ ಹೋಗಲು ಮುಂದಾದರೂ ಪ್ರತಿಭಟನಾಕಾರರು ಅನುಮತಿಸಲಿಲ್ಲ. ಇದರಿಂದ ಅನಿವಾರ್ಯವಾಗಿ ನಡೆದುಕೊಂಡೇ ಮನೆಯತ್ತ ಸಾಗಿದರು.
ನಗರದ‌ ಹೊರವಲಯದ ನಾಗನಹಳ್ಳಿ ಕ್ರಾಸ್ ಬಳಿ ಪ್ರತಿಭಟನಾಕಾರರ ಸೂಚನೆ ಮೀರಿ ಲಾರಿ ಮುಂದಕ್ಕೆ ಒಯ್ಯಲು ಮುಂದಾದ ಚಾಲಕನ ಮೇಲೆ ಯುವಕರ ಗುಂಪೊಂದು ನೀರಿನ ಬಾಟಲಿ ಎಸೆಯಿತು.
ನಗರದ ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಯಲಿದ್ದು, ಅದಕ್ಕಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ವಾಹನಗಳ ಮೂಲಕ ಕಲಬುರಗಿಗೆ ಬರುತ್ತಿದ್ದಾರೆ.
ನಗರದ ಹೀರಾಪುರ ಕ್ರಾಸ್, ಜಗತ್ ವೃತ್ತ, ಸರ್ದಾರ್ ಪಟೇಲ್ ವೃತ್ತ, ರಾಮ ಮಂದಿರ ವೃತ್ತದಲ್ಲಿ ‌ನೂರಾರು‌ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿದ್ದು, ರಸ್ತೆಗಳನ್ನು ಬಂದ್ ಮಾಡಿದ್ದಾರೆ.
ಆಂಬುಲೆನ್ಸ್ ಸೇರಿದಂತೆ ಇತರ ತುರ್ತು ವಾಹನಗಳಿಗೆ ಮಾತ್ರ ದಾರಿ ಬಿಡಲಾಗುತ್ತಿದೆ. ಸಾರಿಗೆ ಬಸ್, ಖಾಸಗಿ ವಾಹನಗಳ ಸಂಚಾರ ಬಹುತೇಕ ಸ್ತಬ್ಧಗೊಂಡಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *