Breaking News

ಲಾಕಪ್ ಡೆತ್‌, ಪೊಲೀಸ್ ದೌರ್ಜನ್ಯಕ್ಕೆ ಬ್ರೇಕ್.. ಡಿಜಿಪಿಯ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿ: ಸಾಕ್ಷ್ಯ ನಾಶ ಮಾಡಿದ ಅಧಿಕಾರಿಗಳಿಗೂ ಕಠಿಣ ಶಿಕ್ಷೆ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಲಾಕಪ್ ಡೆತ್ (ಪೊಲೀಸ್ ಕಸ್ಟಡಿ ಸಾವು) ಹಾಗೂ ಪೊಲೀಸ್ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ರಾಜ್ಯ ಪೊಲೀಸ್ ಇಲಾಖೆ ಮಹತ್ವದ ಮತ್ತು ಕಠಿಣ ಕ್ರಮ ಕೈಗೊಂಡಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ ಅವರು ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಾಯ್ದೆಯಡಿ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿಗೊಳಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಈ ಆದೇಶದ ಪ್ರಕಾರ, ಪೊಲೀಸ್ ಕಸ್ಟಡಿಯಲ್ಲಿ ಯಾವುದೇ ದೌರ್ಜನ್ಯ ಅಥವಾ ಅನುಮಾನಾಸ್ಪದ ಘಟನೆ ನಡೆದ ತಕ್ಷಣವೇ BNSS ಸೆಕ್ಷನ್ 103 ಮತ್ತು 185ರ ಅಡಿಯಲ್ಲಿ ಕಡ್ಡಾಯವಾಗಿ ಸ್ಪಾಟ್ ಮಹಜರ್ ಹಾಗೂ ಸ್ಥಳ ತನಿಖೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ಯಾವುದೇ ವಿಳಂಬವಿಲ್ಲದೆ ತಕ್ಷಣ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ತನಿಖೆಯ ವೇಳೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಯಾವುದೇ ರೀತಿಯ ಪ್ರಭಾವ ಬೀರದಂತೆ ಹಾಗೂ ಸಾಕ್ಷ್ಯ ನಾಶವಾಗದಂತೆ ಸಂಪೂರ್ಣ ಪಾರದರ್ಶಕ ತನಿಖೆ ನಡೆಸಲು ಡಿಜಿಪಿ ಖಡಕ್ ಸೂಚನೆ ನೀಡಿದ್ದಾರೆ.
ಒಂದು ವೇಳೆ ಕಸ್ಟಡಿ ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದರೆ ಅಥವಾ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕೇವಲ ಇಲಾಖಾ ಕ್ರಮವಷ್ಟೇ ಅಲ್ಲದೆ ಕಾನೂನು ಪ್ರಕಾರವೂ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದೇ ವೇಳೆ ‘ಸ್ಟ್ಯಾಂಡಿಂಗ್ ಆರ್ಡರ್-1060’ ಮೂಲಕ ಪೊಲೀಸ್ ಇಲಾಖೆಯ ಕೆಳಹಂತದ ಸಿಬ್ಬಂದಿಯಾದ ಕಾನ್‌ಸ್ಟೆಬಲ್‌, ಹೆಡ್ ಕಾನ್‌ಸ್ಟೆಬಲ್ ಹಾಗೂ ಎಎಸ್‌ಐಗಳ ಮೇಲಿನ ಮಾನಸಿಕ ಕಿರುಕುಳಕ್ಕೂ ಬ್ರೇಕ್ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಸಕಾರಣವಿಲ್ಲದೆ ಅಮಾನತು, ಜಾರ್ಜ್ ಶೀಟ್, ರಜೆ ನಿರಾಕರಣೆ ಅಥವಾ ವೈಯಕ್ತಿಕ ದ್ವೇಷದಿಂದ ಶಿಸ್ತು ಕ್ರಮ ಜರುಗಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸಿಬ್ಬಂದಿಗೆ ವಾರದ ರಜೆ ಕಡ್ಡಾಯವಾಗಿದ್ದು, ಆರೋಗ್ಯ ಸಮಸ್ಯೆಗಳಿದ್ದರೆ ರಜೆ ನಿರಾಕರಿಸಬಾರದು ಎನ್ನಲಾಗಿದೆ.
ಕೆಲವು ಜಿಲ್ಲೆಗಳು ಹಾಗೂ ಕಮಿಷನರೇಟ್‌ಗಳಲ್ಲಿ ಈ ಆದೇಶ ಸರಿಯಾಗಿ ಜಾರಿಯಾಗುತ್ತಿಲ್ಲ ಎಂಬ ಆರೋಪಗಳ ಹಿನ್ನೆಲೆ, ನಿಯಮ ಉಲ್ಲಂಘಿಸುವ ಹಿರಿಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ. ಸಿಬ್ಬಂದಿಗೆ ಅನ್ಯಾಯವಾದರೆ ನೇರವಾಗಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.
ಈ ಆದೇಶದಿಂದ ಕೆಳಹಂತದ ಸಿಬ್ಬಂದಿಯಲ್ಲಿ ನೆಮ್ಮದಿ ಮೂಡಿದ್ದು, ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ, ಶಿಸ್ತು ಹಾಗೂ ಅಧಿಕಾರಿಗಳು-ಸಿಬ್ಬಂದಿ ನಡುವಿನ ಉತ್ತಮ ಬಾಂಧವ್ಯ ಬೆಳೆಸಲು ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಕಾನೂನು ತಜ್ಞರು ಮತ್ತು ಪೊಲೀಸ್ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

Share News

About BigTv News

Check Also

ದೀಪಾವಳಿ ಹಬ್ಬದ ದಿನವೇ ಕುಟುಂಬಸ್ಥರು ಕಣ್ಣೀರು! ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್​ ಸವಾರನ ಪ್ರಾಣ ತೆಗೆದ ಮಹಿಳೆ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ವೇಗವಾಗಿ ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ …

Leave a Reply

Your email address will not be published. Required fields are marked *