ಬೆಂಗಳೂರು: ಮನೆಯ ಬೀಗ ಒಡೆದು ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಬಾಲಕರು ಸೇರಿ ಐದು ಮಂದಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹6 ಲಕ್ಷ ಮೌಲ್ಯದ ಚಿನ್ನದ ನಾಣ್ಯ, ಎಂಟು ವಾಚ್‌ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೇ 19ರಂದು ಜಯನಗರ 4ನೇ ಟಿ ಬ್ಲಾಕ್‌ನ ಮನೆಯೊಂದರಲ್ಲಿ ₹20 ಸಾವಿರ ನಗದು, ವಾಚ್‌ಗಳು, ಮೊಬೈಲ್, ಬೆಳ್ಳಿ ವಸ್ತುಗಳು ಹಾಗೂ ಚಿನ್ನದ ನಾಣ್ಯ ಕಳವು ಮಾಡಲಾಗಿತ್ತು. ಈ ಸಂಬಂಧ ಮನೆ ಮಾಲೀಕ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಇಬ್ಬರು ಬಾಲಕರು ಸೇರಿ ಆರು ಮಂದಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಐವರನ್ನು ಬಂಧಿಸಿರುವ ಪೊಲೀಸರು, ಬಾಲಕರನ್ನು ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗೆ ಶೋಧ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

