ಸಾಗರ: ಮಡಸೂರು ಸಮೀಪದ ಸಿಂಪೆಕೆರೆ ಬಳಿ ಅಡಿಕೆ ಗೊನೆ ಕೊಯ್ಯುವ ಕುಶಲ ಕಾರ್ಮಿಕ ಆನಂದ ಪೂಜಾರಿ (38) ಅವರನ್ನು ಮಂಗಳವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹೆಗ್ಗೋಡು ಸಮೀಪದ ಮುಂಡಿಗೆಸರ ಗ್ರಾಮದವರಾದ ಅವರು, 15 ವರ್ಷಗಳ ಹಿಂದೆ ಮಡಸೂರು ಗ್ರಾಮದ ಯುವತಿಯನ್ನು ವಿವಾಹವಾಗಿ ಅಲ್ಲಿಯೇ ನೆಲೆಸಿದ್ದರು. ಅಡಿಕೆ ಮರ ಹತ್ತಿ ಗೊನೆ ಕೊಯ್ಯುವುದು ಹಾಗೂ ಕೊಳೆರೋಗಕ್ಕೆ ಔಷಧ ಸಿಂಪಡಿಸುವುದು ಸೇರಿದಂತೆ ವಿವಿಧ ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಫೋನ್ ಕರೆ ಬಂದಿದೆ ಎಂದು ಮನೆಯವರಿಗೆ ತಿಳಿಸಿ ಬೈಕ್‌ನಲ್ಲಿ ಹೊರಟಿದ್ದರು. ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಮಡಸೂರು ಗ್ರಾಮದ ಕೆರೆ ಪಕ್ಕದ ರಸ್ತೆ ಬದಿಯಲ್ಲಿ ಅವರ ಬೈಕ್ ಪತ್ತೆಯಾಗಿದ್ದು, ಸಮೀಪದಲ್ಲೇ ಕಲ್ಲುಗಳ ನಡುವೆ ಆನಂದ ಅವರ ಮೃತದೇಹ ಪತ್ತೆಯಾಗಿದೆ. ಹಿಂದಿನಿಂದ ಮಚ್ಚಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

