ಪ್ರೀತಿಸಿ ಮದುವೆಯಾದ ಯುವಕ ವಂಚಿಸಿ ಪರಾರಿಯಾಗಿದ್ದಾನೆಂದು ಯುವತಿಯೊಬ್ಬರು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲೂ ನನ್ನ ಗಂಡನನ್ನು ಹುಡುಕಿಕೊಡುವಂತೆ ಮನವಿ ಮಾಡಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿ ಹೆಚ್ಚು ವೈರಲ್ ಆಗಿತ್ತು. ಆದರೆ ಮಂಗಳವಾರ ತಡರಾತ್ರಿ ಯುವತಿ ಕಾವೇರಿ ನವಲಗುಂದ ಪೊಲೀಸ್ ಠಾಣೆಗೆ ಬಂದು ವರದಕ್ಷಿಣೆ ಕಿರುಕುಳ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಯುವತಿ ನಾನು ಮತ್ತು ಕಲ್ಮೇಶ ಬೋರಶೆಟ್ಟಿ ಪ್ರೀತಿಸಿ ಮದುವೆಯಾಗಿದ್ದೇವು. ಆದರೆ ಅವರ ತಾಯಿ ಶಿವಲೀಲಾ ಬೋರಶೆಟ್ಟರ್ ಹಾಗೂ ತಂದೆ ಬಸವರಾಜ ಅವರಿಗೆ ಈ ಮದುವೆ ಇಷ್ಟವಿರಲಿಲ್ಲವಾದ ಕಾರಣ ದೂರವಾಣಿಯಲ್ಲಿ ಬೇದರಿಕೆ ಹಾಕಿದರು. ನನ್ನ ಗಂಡ ಕಲ್ಮೇಶನಿಗೆ ನೀನು ಸಾಕಷ್ಟು ಓದಿದ್ದೀಯಾ ನಿನಗೆ ಹೆಚ್ಚು ವರದಕ್ಷಿಣೆ ಕೊಟ್ಟು ಮದುವೆಯಾಗುವವರಿದ್ದಾರೆ. ಅವಳನ್ನು ಬಿಟ್ಟು ಬಾ. ಮನೆಗೆ ಆಕೆಯನ್ನು ಕರೆದುಕೊಂಡು ಬರುವುದಾದರೆ ಸಾಕಷ್ಟು ವರದಕ್ಷಿಣೆ ತೆಗೆದುಕೊಂಡು ಬಂದರೆ ಮಾತ್ರ ಮನೆಗೆ ಕರೆದುಕೊಳ್ಳುತ್ತೇವೆಂದು ಬೇದರಿಕೆ ಹಾಕಿದರು. ತಾಯಿ ಮಾತನ್ನು ಕೇಳಿದ ಕಲ್ಮೇಶ ನನ್ನನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದು ಹೊಸ ಬಸ್ ನಿಲ್ದಾಣದ ಬಳಿ ನನ್ನನ್ನು ನಿಂದನೆ ಮಾಡಿದ. ವರದಕ್ಷಿಣೆ ಕೊಡಲಾಗದ ಜನರು ನೀವು ಎಂದು ಮಾನಸಿಕವಾಗಿ ಆವಾಚ್ಚ ಶಬ್ದಗಳಿಂದ ನಿಂದನೆ ಮಾಡಿ ನನ್ನನ್ನು ವಂಚಿಸಿ ಪರಾರಿಯಾಗಿದ್ದು ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳುವಂತೆ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಬಹುಶ ನನ್ನ ವಿರುದ್ಧ ದೂರು ದಾಖಲಿಸಿರುವ ಸುದ್ದಿ ತಿಳಿದ ಕಲ್ಮೇಶ ಬುಧವಾರ ಮಧ್ಯಾಹ್ನ ನವಲಗುಂದ ಪೊಲೀಸ್ ಠಾಣೆಗೆ ಬಂದು ನಾನು ಅವಳನ್ನು ಪ್ರೀತಿಸಿ ಮದುವೆಯಾಗಿದ್ದು ನಿಜ. ನಾನು ಅವಳ ಜೊತೆ ಸಂಸಾರ ನಡೆಸಲು ಸಿದ್ಧನಾಗಿದ್ದೇನೆ. ನಾನು ಅವಳನ್ನು ವಂಚಿಸಿ ಎಲ್ಲಿಯೂ ಪರಾರಿಯಾಗಿರಲಿಲ್ಲ. ಆದರೆ ಜೂನ್ 8 ರಂದು ರಾತ್ರಿ ನಾವಿಬ್ಬರು ಮದುವೆ ಮಾಡಿಕೊಂಡು ಹುಬ್ಬಳ್ಳಿಗೆ ಬಂದಿರುವ ಸುದ್ದಿ ತಿಳಿದುಕೊಂಡ ಕಾವೇರಿಯ ತಂದೆ ಬಸಯ್ಯ ಹಿರೇಮಠ, ಸಹೋದರಿ ಲಕ್ಷ್ಮೀ ಹಿರೇಮಠ, ಇನ್ನೊಬ್ಬ ಸಹೋದರಿ ಸುಧಾ ಹಿರೇಮಠ ಎಂಬುವರು ಮೂವರು ರೌಡಿಗಳೊಂದಿಗೆ ಆಗಮಿಸಿ ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಮೊಬೈಲ್ ಒಡೆದು ಹಾಕಿ ನಮ್ಮ ಜಾತಿ ನಿಮ್ಮ ಜಾತಿ ಬೇರೆಯದಾಗಿದ್ದು ಈ ಮದುವೆ ನಮಗೆ ಇಷ್ಟವಿಲ್ಲ. ನೀವು ಗ್ರಾಮಕ್ಕೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು ಜೀವ ಬೇದರಿಕೆ ಹಾಕಿದ ಕಾರಣ ನಾನು ಹೆದರಿಕೊಂಡು ಬೆಂಗಳೂರಿಗೆ ಹೋಗಿದ್ದೆ ಹೊರತು ಕಾವೇರಿಯನ್ನು ವಂಚಿಸಿ ಹೋಗಿರಲಿಲ್ಲವೆಂದು ಕಲ್ಮೇಶ ಹೇಳಿಕೆ ನೀಡಿದ್ದಾನೆ. ಈಗಲೂ ನಾನು ಕಾವೇರಿ ಜೊತೆ ಸಂಸಾರ ಮಾಡಲು ಸಿದ್ದನಿದ್ದೇನೆ. ಕಾವೇರಿಯನ್ನು ಹುಡುಕಿಕೊಡುವಂತೆ ಮತ್ತು ನಮಗೆ ರಕ್ಷಣೆ ಕೊಡುವಂತೆ ನವಲಗುಂದ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದೇನೆ. ನಮ್ಮ ಕುಟುಂಬದವರ ಜೊತೆ ಆಗಲಾರದವರು ನನ್ನ ತಾಯಿಯ ಹೆಸರು ಕೆಡಿಸಲು ರಾಜಕೀಯ ಮಾಡುತ್ತಿದ್ದಾರೆಂದು ಯುವಕ ಆರೋಪಿಸಿ ಹೇಳಿಕೆ ನೀಡಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





