Breaking News

ಪೊಲೀಸರ ಸರ್ಪಗಾವಲಿನಲ್ಲಿ ಹುಬ್ಬಳ್ಳಿ ಗಣೇಶನ ವಿಜೃಂಭಣೆಯಿಂದ ವಿಸರ್ಜನೆ

ಹುಬ್ಬಳ್ಳಿ: ರಾಜ್ಯಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿಯ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಮೂರು ದಿನಗಳವರೆಗೆ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಇಂದು ಪೊಲೀಸರ ಸರ್ಪಗಾವಲಿನಲ್ಲಿ ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಯಿತು.

ನಗರದ ಈದ್ಗಾ ಮೈದಾನದಿಂದ ಬೆ.11.30 ರ ಸುಮಾರಿಗೆ ನೂರಾರು ಪೊಲೀಸರ ಬಿಗಿ ಭದ್ರತೆಯೊಂದಿಗೆ ಮೂರ್ತಿ ಮೆರವಣಿಗೆ ಆರಂಭವಾಯಿತು. ಅದ್ದೂರಿಯಾಗಿ ವಿಸರ್ಜನಾ ಮೆರವಣಿಗೆ ಮೂಲಕ ಚೆನ್ನಮ್ಮ ವೃತ್ತ ಮಾರ್ಗವಾಗಿ ಯಾವುದೇ ಪಾಶ್ಚಾತ್ಯ ಸಂಸ್ಕೃತಿ ವಾದ್ಯಗಳಿಗೆ ಮಾರು ಹೋಗದೇ, ಕೇವಲ ದೇಶಿಯ ಹಿಂದೂ ಸಂಪ್ರದಾಯದ ವಾದ್ಯಮೇಳದೊಂದಿಗೆ ಮೆರವಣಿಗೆ ಸಾಗಿತು. ಗಾಜಿನ ಮನೆ ಹಿಂಭಾಗದಲ್ಲಿರುವ ಗಣೇಶ ಬಾವಿಯಲ್ಲಿ ವಿಘ್ನೇಶ್ವರನಿಗೆ ವಿದಾಯ ಹೇಳಲಾಯಿತು.

ಇನ್ನೂ ಮೂರು ದಿನಗಳ ಶಾಂತಿ ಸೌಹಾರ್ದತೆಯಿಂದ ನಡೆದ ಗಣೇಶೋತ್ಸವಕ್ಕೆ ಹಲವಾರು ಗಣ್ಯಾತಿಗಣ್ಯರು ಸಾಕ್ಷಿಯಾದರು. ಇಂದು ಸಹ ಯಾವುದೇ ಅಡೆತಡೆ ಆಗದಂತೆ ಪೋಲಿಸ್ ಇಲಾಖೆಯಿಂದ ಸರ್ಪ ಗಾವಲು ಹಾಕುವ ಮೂಲಕ ಈದ್ಗಾ ಮೈದಾನದಿಂದ ಇಂದಿರಾಗಾಜಿನ ಮನೆಯ ಪಕ್ಕದಲ್ಲಿರುವ ವಿಸರ್ಜನೆ ಬಾವಿವರೆಗೆ ಹದ್ದಿನ ಕಣ್ಣು ಇರಿಸಲಾಗಿತ್ತು.

ವಿಸರ್ಜನೆ ಮೆರವಣಿಗೆ ಉದ್ದಕ್ಕೂ ವಿವಿಧ ಕಲಾತಂಡಗಳು ವಾದ್ಯಗಳನ್ನು ನುಡಿಸುವ ಮೂಲಕ ವಿಸರ್ಜನೆ ಕಾರ್ಯಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟವು. ನಾಸಿಕ್ ಡೋಲ್, ಝಾಂಜ್ ಮೇಳಕ್ಕೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹೆಜ್ಜೆ ಹಾಕಿದ್ದು, ನೋಡುಗರ ಗಮನ ಸೆಳೆಯಿತು.

ಅಲ್ಲದೇ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ನೂರಾರು ಭಕ್ತಗಣ ಭಗವಾ ಧ್ವಜ ಹಿಡಿದುಕೊಂಡು ಸಂಭ್ರಮದ ಅದ್ದೂರಿ ವಿಸರ್ಜನಾ ಮೆರವಣಿಗೆಗೆ ಸಾಕ್ಷಿಯಾದರು. ಕೆಲವರು ಸಿಳ್ಳೆ, ಕೇಕೆ, ಹೆಜ್ಜೆ ಹಾಕಿ ಸಂಭ್ರಮಿಸಿದರೆ, ಮತ್ತೆ ಕೆಲವರು ಜೈ ಗಣೇಶ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ವಿಸರ್ಜನಾ ಮೆರವಣಿಗೆ ವೀಕ್ಷಿಸಲು ರಸ್ತೆಯುದ್ದಕ್ಕೂ ಸಾವಿರಾರು ಮಂದಿ ಜಮಾಯಿಸಿದ್ದರು.

ಪೊಲೀಸ್ ಬಂದೋಬಸ್ತ್ ನಲ್ಲಿ ಎಸಿಪಿ ಸಾಹೀಲ್ ಬಾಗ್ಲಾ, ಇನ್ನಿತರ ಪೊಲೀಸ್ ಅಧಿಕಾರಿಗಳ ಹಾಜರಿದ್ದು, ಶಾಂತಿ ಕಾಪಾಡುವಲ್ಲಿ ಶ್ರಮಿಸಿದರು.

ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜಯ ಬಡಸ್ಕರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ,ಸದಸ್ಯರಾದ ವೀರಣ್ಣ ಸವಡಿ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾನ, ದತ್ತಮೂರ್ತಿ ಕುಲಕರ್ಣಿ, ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಅನ್ಯ ಜಿಲ್ಲೆಗಳಿಂದ ಬಂದಂತ ಸಾವಿರಾರು ಭಕ್ತಾಧಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.

ರಾಣಿ ಚೆನ್ನಮ್ಮ ಮೈದಾನ ಗಜಾನನ ವಿಸರ್ಜನೆ ಹಿನ್ನಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅನಗತ್ಯ ಗೊಂದಲ ಸೃಷ್ಟಿಸುವ ಕಿಡಿಗೇಡಿಗಳನ್ನು ಗುರುತಿಸಲು ವಿಡಿಯೋ ಚಿತ್ರಿಕರಣಗಳು ಕಂಡು ಬಂದವು. ಅಲ್ಲದೇ ಮಫ್ತಿಯಲ್ಲಿ ಪೊಲೀಸರು ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತರನ್ನು ಮುಂದೆ ಕಳುಸುತ್ತಿದ್ದ ದೃಶ್ಯಗಳು ಕಂಡು ಬಂದಿತು.

ನಗರದ ರಾಣಿ ಮೈದಾನದ ಗಜಾನನ ವಿಸರ್ಜನೆ ಹಿನ್ನಲೆಯಲ್ಲಿ ನಗರದ ಕಿತ್ತೂರ ಚೆನ್ನಮ್ಮ ವೃತ್ತದಿಂದ ಗ್ಲಾಸ್ ಹೌಸ್ ವರೆಗೆ ವಾಹನ ಸಂಚಾರಕ್ಕೆ ಅಡೆ ತಡೆ ಉಂಟಾಯಿತು. ಇನ್ನೂ ಚೆನ್ನಮ್ಮ ಸರ್ಕಲ್ ನಿಂದ ಹೋಗುವ ವಾಹನಗಳನ್ನು ನಗರದ ದೇಶಪಾಂಡೆ ಮಾರ್ಗವಾಗಿ ಗದಗ ಹಾಗೂ ವಿಜಯಪುರ ರಸ್ತೆಗೆ ವಾಹನಗಳ ಸಂಚಾರವನ್ನು ಬದಲಿಸಲಾಯಿತು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *