ಹುಬ್ಬಳ್ಳಿ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿಗಳಲ್ಲಿ ಉಚಿತ ಅಕ್ಕಿ ಕೊಡುವ ಯೋಜನೆಗೆ, ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದ್ದು, ಬಡವರ ಅಕ್ಕಿಯಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ. ಎಲ್ಲಿ ಮುಂಬರುವ ಲೋಕಸಭೆಗೆ ತಮಗೆ ಹಿನ್ನಡೆಯಾಗಬಹುದು ಎಂಬ ಭಯದಲ್ಲಿ ರಾಜ್ಯಕ್ಕೆ ಅಕ್ಕಿ ಕೊಡಲು ಹಿಂದೇಟು ಹಾಕುತ್ತಿದೆ.
ಜನರಿಗೆ ಅಕ್ಕಿ ವಿತರಣೆಯಲ್ಲಿ ವಿಳಂಬವಾದಲ್ಲಿ ಅದಕ್ಕೆ ನೇರ ಹೊಣೆ ಕೇಂದ್ರ ಸರ್ಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂಅಹ್ಮದ್ ಹೇಳಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು,
ಭ್ರಷ್ಟಾಚಾರ, ಬೆಲೆ ಏರಿಕೆ ವಿರುದ್ಧ ಹೋರಾಡ ಮಾಡಿ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಟ್ಟು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ನಮ್ಮ ಪಕ್ಷದ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿ ಅನುಷ್ಠಾನ ಮಾಡುವಲ್ಲಿ ಮುಂದಾಗುತ್ತೇವೆ ಎಂದರು.
ಈಗಾಗಲೇ ಮೊದಲ ಗ್ಯಾರಂಟಿ ಮಹಿಳೆಯರಿಗೆ ಉಚಿತ ಬಸ್ ಅನುಷ್ಠಾನ ಮಾಡಿದ್ದೇವೆ. ಇದೀಗ ಎರಡನೇ ಗ್ಯಾರಂಟಿ ಅನ್ನಭಾಗ್ಯಕ್ಕೆ ಮುಂದಾಗುತ್ತಿದ್ದಂತೆ ಕೇಂದ್ರ ಬಡವರ ಅಕ್ಕಿಯಲ್ಲಿ ರಾಜಕೀಯ ಮಾಡುತ್ತಿದೆ.
ಸಚಿವ ಕೆ.ಹೆಚ್.ಮುನಿಯಪ್ಪ ಅವರು ಅಕ್ಕಿ ವಿಷಯವಾಗಿ ಪಿಯುಷ್ ಘೋಯಲ್ ಅವರನ್ನು ಭೇಟಿಯಾಗಲು ಸತತ ಮೂರು ದಿನ ಪ್ರಯತ್ನ ಮಾಡಿದರು, ಕೇಂದ್ರ ಸಚಿವ ಪಿಯುಷ್ ಘೋಯಲ್ ಅವರು ಸುಖಾಸುಮ್ಮನೆ ಕಾಲಹರಣ ಮಾಡಿ ಸಕಾರಾತ್ಮಕ ಸ್ಪಂದನೆ ನೀಡಲಿಲ್ಲ.
ಇದು ಕೇಂದ್ರದ ಮಲತಾಯಿ ಧೋರಣೆಯನ್ನು ತೋರಿಸುತ್ತದೆ. ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಈ ಹಿಂದೆ ಬಿಜೆಪಿ ಚುನಾವಣೆ ವೇಳೆ 600 ಕ್ಕೂ ಹೆಚ್ಚು ಘೋಷಣೆಗಳನ್ನು ಪ್ರಣಾಳಿಕೆಯಲ್ಲಿ ನೀಡಿತ್ತು. ಅದರಲ್ಲಿ 60 ಘೋಷಣೆಯನ್ನು ಕೂಡಾ ಬಿಜೆಪಿ ಈಡೇರಿಸಲಿಲ್ಲ. ಇದನ್ನು ಜನರಿಗೆ ತಿಳಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸೀಟ್ ಗಳನ್ನು ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಅಷ್ಟೇ ಅಲ್ಲದೇ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದು, ರಾಹುಲ್ ಗಾಂಧಿ ಪ್ರಧಾನಮಂತ್ರಿ ಅಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





