ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭ ವಾಗಿದ್ದು, ಅರಮನೆ ಆವರಣದಲ್ಲಿ ಕುಶಾಲತೋಪು ಸಿಡಿಸುವ ಫಿರಂಗಿ ಗಾಡಿಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಯಿತು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ 11 ಫಿರಂಗಿಗಳಿಗೆ ಪೂಜೆ ಸಲ್ಲಿಸಿದರು. ಡಿಸಿಪಿಗಳಾದ ಎಂ.ಮುತ್ತುರಾಜ್, ಜಾಹ್ನವಿ, ಎಸಿಪಿ ಸತೀಶ್ ಪಾಲ್ಗೊಂಡಿದ್ದರು.
ಅರಮನೆ ಅರ್ಚಕ ಪ್ರಹ್ಲಾದರಾವ್ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯದಲ್ಲಿ ಮೊದಲಿಗೆ ಕುಶಾಲ ತೋಪು ಸಿಡಿಸುವಾಗ ಯಾವುದೇ ಅವಘಡವಾಗದಂತೆ ವಿಘ್ನನಿವಾರಕ ಗಣಪತಿಗೆ ಪೂಜೆ ಸಲ್ಲಿಸಲಾಯಿತು. ನಂತರ ಚಾಮುಂಡೇಶ್ವರಿ ದೇವತೆ ಸ್ಮರಿಸಲಾಯಿತು. ಮೃತ್ಯುಂಜಯ ಪೂಜೆ ಸಲ್ಲಿಸಿ 9 ಬಾರಿ ಮಂತ್ರಗಳನ್ನು ಆಯುಕ್ತರಿಂದ ಹೇಳಿಸಿ ಮಂಗಳಾರತಿ ಮಾಡಿಸಲಾಯಿತು.
ಜಂಬೂಸವಾರಿ ದಿನದಂದು ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವಾಗ 21 ಕುಶಾಲ ತೋಪು ಸಿಡಿಸುವುದು ಸಂಪ್ರದಾಯ. ಅದಕ್ಕಾಗಿ ಪೂರ್ವಭಾವಿಯಾಗಿ ಆನೆಗಳು ಹಾಗೂ ಕುದುರೆಗಳು ಶಬ್ಧಕ್ಕೆ ಬೆಚ್ಚದಂತೆ ಮಾಡಲು ಪೂರ್ವಾಭ್ಯಾಸ ನೀಡಲಾಗುತ್ತದೆ.
ಕುಶಾಲತೋಪು ತಾಲೀಮು ಕೆಲವೇ ದಿನಗಳಿರುವುದರಿಂದ 11 ಫಿರಂಗಿ ಗಳನ್ನು ಬುಧವಾರ ಸ್ವಚ್ಛಗೊಳಿಸಿದ ಪೊಲೀಸ್ ಸಿಬ್ಬಂದಿ ಪೂಜೆಗೆ ಅಣಿಗೊಳಿಸಿದ್ದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಂಬೂಸವಾರಿ ಮೆರವಣಿಗೆ ದಿನದಂದು ಅರಮನೆ ಹಾಗೂ ಪಂಜಿನ ಕವಾಯತು ಮೈದಾನದಲ್ಲಿ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಸಿಬ್ಬಂದಿಯು ಅದಕ್ಕಾಗಿ ಅಭ್ಯಾಸ ನಡೆಸಲು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





