ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಹಣದಾಸೆಗಾಗಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಹೋಗುತ್ತಿದ್ದಾರೆ. ಅವರು ಪಕ್ಷವನ್ನು ಬಿಟ್ಟು ಹೋಗುತ್ತಿರುವುದರಿಂದ ಪಕ್ಷಕ್ಕೆ ಹಿಡುದಿರುವ ಗ್ರಹಣ ಬಿಟ್ಟಂತಾಗಿದೆ…ಪಕ್ಷ ಬಿಟ್ಟು ಹೋಗುವವರು ಗೌರವಯುತವಾಗಿ ಪಕ್ಷಬಿಟ್ಟು ಹೋಗಲಿ ಅದನ್ನು ಬಿಟ್ಟು ದೇವೇಗೌಡರ ಕುಟುಂಬವರ್ಗ ಹಾಗೂ ಹೆಣ್ಣುಮಕ್ಕಳ ಬಗ್ಗೆ ಮಾತನಾಡಿದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಂದು ಪುರಸಭೆಯ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಅವರು ಇಂದು ಜೆಡಿಎಸ್ ಮುಖಂಡರು ಹಾಗೂ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಾಸಕರ ನಡೆಯನ್ನು ಖಂಡಿಸಿದರು.
ಜೆಡಿಎಸ್ ಮುಖಂಡ ಬಸ್ ಕೃಷ್ಣೇಗೌಡ ಮತ್ತು ದೇವೇಗೌಡರ ಪುತ್ರಿ ಡಾ.ಅನುಸೂಯ ಅವರ ಆಶೀರ್ವಾದದ ಫಲವಾಗಿ ಬಿ’ಫಾರಂ ಪಡೆದುಕೊಂಡು ಶಾಸಕರಾಗಿ ಆಯ್ಕೆಯಾದ ನಾರಾಯಣಗೌಡರು ಅನುಸೂಯಮ್ಮ ನನ್ನ ಭಾಗ್ಯದೇವತೆ, ನನ್ನ ತಾಯಿಯ ಸಮಾನ ಅವರಿಂದಾಗಿ ನಾನು ಶಾಸಕನಾದೆ ಎಂದೆಲ್ಲಾ ಕೃತಜ್ಞತೆಯ ಮಾತುಗಳನ್ನಾಡಿ ಎರಡನೇ ಅವಧಿಗೆ ಶಾಸಕರಾದ ನಂತರ ಆಪರೇಷನ್ ಕಮಲಕ್ಕೆ ತುತ್ತಾಗಿ ಇಂದು ದೇವೇಗೌಡರ ಹೆಣ್ಣು ಮಕ್ಕಳ ಬಗ್ಗೆ ಆರೋಪ ಹೊರಿಸುತ್ತಿರುವುದು ಒಳ್ಳೆಯ ಲಕ್ಷಣವಲ್ಲ, ಪುಟ್ಟಮ್ಮ ಚಿಕ್ಕೇಗೌಡ ನಾಗರಿಕ ಟ್ರಸ್ಟನ್ನು ಸ್ಥಾಪಿಸಿ ಶಾಸಕರಾದ ನಂತರ ಟ್ರಸ್ಟಿನ ಬಾಗಿಲು ಮುಚ್ಚಿ ಸೇವಾ ಚಟುವಟಿಕೆಗಳನ್ನು ನಿಲ್ಲಿಸಿದ ಶಾಸಕರು ಸಮಯಸಾಧಕ ರಾಜಕಾರಣಿಯಾಗಿದ್ದಾರೆ. ತಾಲ್ಲೂಕಿನ ಅಭಿವೃದ್ಧಿಯ ಕಡೆಗೆ ಗಮನ ಹರಿಸದೇ ಮುಂಬೈ-ಬೆಂಗಳೂರು ಸುತ್ತಾಡಿಕೊಂಡು ಕಾಲಹರಣ ಮಾಡಿ ಹಣದಾಸೆ ಹಾಗೂ ಮಂತ್ರಿಪದವಿಯ ಆಸೆಗೆ ಬಿಜೆಪಿ ಸೇರಲು ಹೊರಟಿದ್ದಾರೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ನಾರಾಯಣಗೌಡರ ಯುಗಾಂತ್ಯವಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿಯಿದೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ನಾರಾಯಣಗೌಡ ಕಣಕ್ಕಿಳಿದರೆ ಠೇವಣಿ ಕಳೆದುಕೊಳ್ಳಲಿದ್ದು ಮತ್ತೊಮ್ಮೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಹೊಸ ರಾಜಕೀಯ ಮನ್ವಂತರಕ್ಕೆ ಕೆ.ಆರ್.ಪೇಟೆ ಸಾಕ್ಷಿಯಾಗಲಿದೆ ಎಂದು ಸಂತೋಷ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು… ಪತ್ರಿಕಾಗೋಷ್ಠಿಯಲ್ಲಿ ಆಲಂಬಾಡಿಕಾವಲು ಗ್ರಾ.ಪಂ ಮಾಜಿಅಧ್ಯಕ್ಷ ಸಿದ್ಧೇಗೌಡ, ತಾ.ಪಂ ಸ್ಥಾಯಿಸಮಿತಿ ಅಧ್ಯಕ್ಷ ರಾಜು, ಗದ್ದೇಹೊಸೂರು ದರ್ಶನ್, ಹೊಸಕೋಟೆ ಮಹೇಶ್, ಹೊಸಹೊಳಲು ಅರ್ಜುನ, ಹೆಮ್ಮನಹಳ್ಳಿ ತಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದು ಶಾಸಕ ನಾರಾಯಣಗೌಡರ ನಡೆಯನ್ನು ಖಂಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





