ಬೆಂಗಳೂರು: ರಾಜ್ಯದಲ್ಲಿ ಎರಡು ಸಾವಿರಕ್ಕೆ ಹೆಚ್ಚಿದ್ದ ಕೊರೋನಾ ಸೋಂಕಿನ ಹೊಸ ಪ್ರಕರಣಗಳು ತುಸು ಇಳಿಕೆಯಾಗಿವೆ. ಆದರೆ, ನಿರಂತರ ಹೊಸ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳು 10 ಸಾವಿರದ ಗಡಿ ದಾಟಿವೆ.
ಶನಿವಾರ 1,886 ಹೊಸ ಪ್ರಕರಣ ಪತ್ತೆಯಾಗಿದ್ದು, 1,242 ಮಂದಿ ಗುಣಮುಖರಾಗಿದ್ದಾರೆ. ಬಳ್ಳಾರಿಯಲ್ಲಿ 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ. 32 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.5.8 ರಷ್ಟುದಾಖಲಾಗಿದೆ. ಶುಕ್ರವಾರಕ್ಕೆ ಹೋಲಿದರೆ 150 ಸೋಂಕು ಪರೀಕ್ಷೆಗಳು ತಗ್ಗಿವೆ.
ಆದರೆ, ಹೊಸ ಪ್ರಕರಣಗಳು 246 ಕಡಿಮೆಯಾಗಿವೆ (ಶುಕ್ರವಾರ 2130 ಕೇಸ್, ಸಾವು ನಾಲ್ಕು) . ರಾಜ್ಯದಲ್ಲಿ ಶುಕ್ರವಾರ ಐದೂವರೆ ತಿಂಗಳ ಬಳಿಕ ಕೊರೋನಾ ಹೊಸ ಪ್ರಕರಣಗಳು ಎರಡು ಸಾವಿರ ಗಡಿದಾಟಿದ್ದು, ಸೋಂಕಿತರ ಸಾವು ಕೂಡಾ ನಾಲ್ಕೂವರೆ ತಿಂಗಳ ಬಳಿಕ ನಾಲ್ಕಕ್ಕೆ ಏರಿಕೆಯಾಗಿತ್ತು. ಸದ್ಯ ತುಸು ಇಳಿಕೆಯಾಗಿದೆ. ಕಳೆದ ಒಂದು ತಿಂಗಳಿಂದ ಹೊಸ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆ ಸಕ್ರಿಯ ಸೋಂಕಿತರು 10509ಕ್ಕೆ ಹೆಚ್ಚಿವೆ. ಈ ಪೈಕಿ 66 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10 ಮಂದಿ ಐಸಿಯು, 9 ಮಂದಿ ಆಕ್ಸಿಜನ್, 47 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 10,443 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





