ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿ ವ್ಯಾಪ್ತಿಯ ಚೊಕ್ಕಹಳ್ಳಿ ಗ್ರಾಮದ ಸರ್ವೆ ನಂಬರ್.16ರ ಅಳತೆಗೆ ಶಾಸಕ ಪ್ರದೀಪ್ ಈಶ್ವರ್ ಅವರು ಸೂಚನೆ ನೀಡಿದ್ದು ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ನಾಂದಿ ಹಾಡುವ ಲಕ್ಷಣಗಳು ಕಾಣಿಸಿಕೊಂಡಿವೆ.ಸರ್ವೇ ನಂಬರ್ 16 ರಲ್ಲಿ 42 ಎಕರೆ ಸರ್ಕಾರಿ ಭೂಮಿ ಇದೆ. ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆ.ವಿ ಕ್ಯಾಂಪಸ್ ಅಸುಪಾಸಿನವರೆಗೂ ಈ ಜಮೀನು ಬರುತ್ತದೆ ಎನ್ನುತ್ತವೆ ಭೂ ದಾಖಲೆಗಳ ಇಲಾಖೆ ಮೂಲಗಳು, ಶಿಕ್ಷಣ ಸಂಸ್ಥೆಯ ಸಮೀಪ ಈ ಜಮೀನು ಒತ್ತುವರಿಯಾಗಿದೆಯೇ -ಎನ್ನುವುದನ್ನು ಖಚಿತಪಡಿಸಿಕೊಳ್ಳಲು -ಅಳತೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಸುತ್ತಿವೆ.
ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಕೆ.ವಿ.ನವೀನ್ ಕಿರಣ್ ಮತ್ತು ಶಾಸಕ -ಪ್ರದೀಪ್ ಈಶ್ವರ್ ರಾಜಕೀಯವಾಗಿ ಕಡು ವಿರೋಧಿಗಳಾಗಿದ್ದು ರಾಜಕೀಯ ಜಿದ್ದಾ ಜಿದ್ದಿಗೆ ದಾರಿ ಮಾಡಿಕೊಡುವ ಸಾಧ್ಯ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಇತ್ತೀಚಿಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಜಮೀನು ಅಳತೆ ಮಾಡಬೇಕು. ಸರ್ಕಾರಿ ಜಮೀನು ಒತ್ತುವರಿ ಆಗಿದ್ದರೆ ತೆರವುಗೊಳಿಸಬೇಕು ಎಂದು ಪ್ರದೀಪ್ ಈಶ್ವರ್ ಸೂಚನೆ ನೀಡಿದ್ದಾರೆ. ಶಾಸಕರು ಸೂಚನೆ ನೀಡಿದ ಎರಡು ಮೂರು ದಿನಗಳಲ್ಲಿಯೇ ಅಧಿಕಾರಿಗಳು ಅಳತೆಗೆ ಮುಂದಾಗಿದ್ದಾರೆ. ಶಾಸಕರು ಕೆ.ವಿ. ಕ್ಯಾಂಪಸ್ ಅನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಈ ಅಳತೆಗೆ ಮುಂದಾಗಿದ್ದಾರೆ ಎನ್ನುತ್ತವೆ ಅಧಿಕಾರಿಗಳ ಮೂಲಗಳು.
bigtvnews | Hubli Dharwad News | Kannada News | Karnataka News Hubli News | News In Hubli | Local news





